Advertisement

Bheema; ನಾನು ಶೋಕಿಗಾಗಿ ಸಿನಿಮಾ ಮಾಡಲ್ಲ…; ಗೆದ್ದ ಭೀಮನೊಂದಿಗೆ ಮತ್ತೊಮ್ಮೆ ಎದ್ದ ವಿಜಯ್‌

01:25 PM Aug 16, 2024 | Team Udayavani |

ನೋಡ ನೋಡುತ್ತಲೇ “ಭೀಮ’ (Bheema) ದೊಡ್ಡ ಹಿಟ್‌ ಆಗಿದೆ. ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಿಂದ ಹಿಡಿದು ಮಲ್ಟಿಪ್ಲೆಕ್ಸ್‌ಗಳಲ್ಲೂ “ಭೀಮ’ ಅಲ್ಲಾಡದೇ ಗಟ್ಟಿಯಾಗಿ ನಿಂತಿದ್ದಾನೆ. ನಿರ್ಮಾಪಕರ ಮೊಗದಲ್ಲಿ ನಗು ಮೂಡಿದರೆ, ಸಿನಿಮಾ ಮಂದಿಗೆ “ಭೀಮ’ ವಿಶ್ವಾಸ ತುಂಬಿದ್ದಾನೆ. ಈ ಹಿನ್ನೆಲೆಯಲ್ಲಿ ವಿಜಯ್‌ (Vijay Kumar) ಖುಷಿಯಾಗಿದ್ದಾರೆ. ಅವರ ಆ ಖುಷಿಯ ಮಾತುಗಳು ಇಲ್ಲಿವೆ…

Advertisement

* ನಾನು ನಂಬೋದು ನನ್ನ ಶ್ರಮವನ್ನು… ಆ ಶ್ರಮ ಇವತ್ತು ಫ‌ಲ ಕೊಟ್ಟಿದೆ. ನಾನು ನಂಬಿರುವ ಗುರುಗಳು ನನ್ನ ಕೈ ಬಿಟ್ಟಿಲ್ಲ. ನನ್ನ ನಂಬಿದ ನಿರ್ಮಾಪಕರಿಗೆ ಮೋಸವಾಗಿಲ್ಲ. ಆ ಖುಷಿ ನನ್ನಲ್ಲಿದೆ. ಎಲ್ಲಾ ನಟರ ಅಭಿಮಾನಿಗಳು “ಭೀಮ’ ಚಿತ್ರವನ್ನು ಬೆಂಬಲಿಸುತ್ತಿದ್ದಾರೆ. ಆ ಖುಷಿ ಇದೆ.

* ಡ್ರಗ್ಸ್‌ ಕುರಿತು ಜಾಗೃತಿ ಮೂಡಿಸಬೇಕೆಂಬ ಉದ್ದೇಶವಿತ್ತು. ಅದು “ಭೀಮ’ನಲ್ಲಿ ಈಡೇರಿದೆ. ಅನೇಕರು “ಯಾಕೆ ಅಷ್ಟೊಂದು ಹಾರ್ಶ್‌ ಆಗಿ ಹೇಳಿದ್ದೀರಿ’ ಎಂದು ಕೇಳುತ್ತಾರೆ. ಇವತ್ತಿನ ಸಂದರ್ಭ ದಲ್ಲಿ ಯಾರಾದರೊಬ್ಬರು “ಭೀಮ’ ನಂಥವರು ಎದ್ದು ನಿಲ್ಲದೇ ಹೋದರೆ ಡ್ರಗ್ಸ್‌ ಇಡೀ ಬೆಂಗಳೂರನ್ನು, ಯುವ ಸಮೂಹವನ್ನು ನಾಶ ಮಾಡುತ್ತದೆ. ಈ ಕುರಿತು ನನ್ನ ಹಾಗೂ ತಂಡದ ಹೋರಾಟ ಮುಂದುವರೆಯುತ್ತದೆ.

content-img

* “ಸಲಗ’ ಗೆದ್ದಾಗ ಗಾಂಧಿನಗರದ ಕೆಲವರು ಇದು ಫ್ಲೂಕ್‌ ಎಂದರು.. “ಭೀಮ’ ಬಿದ್ದೋಗುತ್ತೆ ಎಂದರು ಮಾತನಾಡಿದರು. ನಮ್ಮ ಚಿತ್ರರಂಗ ಚಿಕ್ಕದು… ಎಲ್ಲವೂ ನನ್ನ ಕಿವಿಗೆ ಬೀಳುತ್ತಿತ್ತು.ಆದರೆ, ನಾನು ನನ್ನ ಕೆಲಸವನ್ನು ನಂಬಿದೆ. ಅದಕ್ಕೆ ನನ್ನ ತಂಡ ಸಾಥ್‌ ಕೊಟ್ಟಿತು. ಅದು ಇವತ್ತು ಫ‌ಲ ನೀಡಿದೆ.

Advertisement

* ಈ ಸಂದರ್ಭದಲ್ಲಿ ನಾನು ಥ್ಯಾಂಕ್ಸ್‌ ಹೇಳಬೇಕಾಗಿರುವುದು ನನ್ನ ನಿರ್ಮಾಪಕರಾದ ಕೃಷ್ಣ ಸಾರ್ಥಕ್‌ ಹಾಗೂ ಜಗದೀಶ್‌ ಗೌಡ ಅವರಿಗೆ. ಅವರು ನನ್ನನ್ನು ಪೂರ್ಣ ಪ್ರಮಾಣದಲ್ಲಿ ನಂಬಿದರು. ನಾನು ಏನು ಹೇಳಿದರೂ, ಕೇಳಿದರೂ ಇಲ್ಲ ಅನ್ನಲಿಲ್ಲ. ಅವರ ಆ ನಂಬಿಕೆ ಎಷ್ಟೊ ಸಾರಿ ನನ್ನಲ್ಲಿ ಭಯ ಹುಟ್ಟಿಸಿತ್ತು. ಅವರು ಬೆಂಬಲ ಇಲ್ಲದೇ ಇರುತ್ತಿದ್ದರೆ ಇಷ್ಟೊಂದು ದೊಡ್ಡ ಮಟ್ಟಕ್ಕೆ “ಭೀಮ’ ಗೆಲ್ಲುತ್ತಿರಲಿಲ್ಲ.

* ನಾಯಕಿಯ ವಿಚಾರದಲ್ಲಿ ನಮ್ಮ ನಿರ್ಮಾಪಕರು ಯಾವ ಟಾಪ್‌ ಹೀರೋಯಿನ್‌ಗಳನ್ನು ಬೇಕಾದರೂ ಕರೆಸಿ ಎಂದಿದ್ದರು. ಆದರೆ, ನನಗೆ ನಮ್ಮ ಗಲ್ಲಿಯಲ್ಲಿ ಓಡಾಡಿಕೊಂಡಿರುವಂತಹ ಹುಡುಗಿ ಬೇಕಿತ್ತು. ಆಗ ಕಾಣಿಸಿದ್ದೇ ಅಶ್ವಿ‌ನಿ. ಆಕೆ ಕೂಡಾ ನನ್ನ ತರಹನೇ ಬ್ಲ್ಯಾಕ್‌ ಬ್ಯೂಟಿ. ಪಾತ್ರಕ್ಕೆ ಚೆನ್ನಾಗಿ ಹೊಂದಿಕೆಯಾಗಿದ್ದಾರೆ. ಇದರ ಜೊತೆಗೆ ಪೊಲೀಸ್‌ ಆಫೀಸರ್‌ ಆಗಿ ನಟಿಸಿರುವ ಪ್ರಿಯಾ ಅವರಿಗೂ ಈ ಚಿತ್ರ ಒಂದೊಳ್ಳೆಯ ಲೈಫ್ ನೀಡುತ್ತದೆ ಎಂಬ ವಿಶ್ವಾಸವಿದೆ.

* ಸಿನಿಮಾ ರಿಲೀಸ್‌ ಮುನ್ನ ಯಾವುದೇ ಬಿಝಿನೆಸ್‌ ಆಗದೆಯೂ ನಮ್ಮ ನಿರ್ಮಾಪಕರು ಪ್ರೇಕ್ಷಕರನ್ನು, ಚಿತ್ರಮಂದಿರಗಳನ್ನೇ ನಂಬಿ ಕೊಂಡು ಬಿಡುಗಡೆ ಮಾಡಿದರು. ಅದಕ್ಕೆ ಈಗ ಫ‌ಲ ಸಿಕ್ಕಿದೆ.

* ಮುಂದೆ ನನ್ನ ಜೊತೆ ಸಹಾಯಕ ನಿರ್ದೇಶಕರಾಗಿ ಇದ್ದ ಹುಡುಗರ ಜೊತೆ ಸಿನಿಮಾ ಮಾಡಬೇಕೆಂದಿದ್ದೇನೆ. ಅವರಿಗೆ ನನ್ನ ಪಲ್ಸ್‌ ಗೊತ್ತಿದೆ.

* ನಾನು ಯಾವತ್ತೂ ಶೋಕಿಗಾಗಿ ಸಿನಿಮಾ ಮಾಡುವುದಿಲ್ಲ. ಪೂರ್ವತಯಾರಿಲ್ಲದೇ ಯಾವ ಕೆಲಸಕ್ಕೂ ಮುಂದಾಗುವುದಿಲ್ಲ.

* ನನ್ನ ಅಮ್ಮ “ನಿನ್ನ ಹೆಸರನ್ನು ವಿಜಯ್‌ ಕುಮಾರ್‌ ಎಂದಿಟ್ಟುಕೋ. ನಿನಗೆ ಒಳ್ಳೆಯದಾಗುತ್ತೆ’ ಎಂದರು. ಅದರಂತೆ ಇಟ್ಟುಕೊಂಡೆ. ಈಗ ಎಲ್ಲವೂ ಒಳ್ಳೆಯದಾಗುತ್ತಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.