ಮಡಿಕೇರಿ: ರಷ್ಯಾದ ಅತಿ ಎತ್ತರದ ಮೌಂಟ್ ಎಲ್‌ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬಂದಿರುವ ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ಭವಾನಿ ಈಗ ನ್ಯೂಜಿಲ್ಯಾಂಡ್‌ನ ಮೌಂಟ್ ರೂಪೇವ್‌ನಲ್ಲಿ ತರಬೇತಿ ಪಡೆದ ಭಾರತದ ಮೊದಲ ಯುವತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಹಿಮಾಚ್ಛಾದಿತ ಪರ್ವತ ಆರೋಹಣ, ಈಜು, ಕುದುರೆ ಸವಾರಿ ಹೀಗೆ ಹಲವು ಸಾಹಸಮಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಟಿ.ಎನ್. ಭವಾನಿ ಈಗ ನ್ಯೂಜಿಲ್ಯಾಂಡ್‌ನ ಜ್ವಾಲಾಮುಖೀ ಪರ್ವತ ಮೌಂಟ್ ರೂಪೇವ್‌ನಲ್ಲಿ ಮೂರು ತಿಂಗಳ ಕಾಲ ಸ್ಕೀಯಿಂಗ್ ತರಬೇತಿ ಮುಗಿಸಿ ಅಂತಾರಾಷ್ಟ್ರೀಯ ಸ್ಕೀಯಿಂಗ್ ಬೋಧಕರ ಅರ್ಹತೆಯನ್ನು ಪಡೆದುಕೊಂಡಿದ್ದು, ಹೆಚ್ಚಿನ ತರಬೇತಿಗೆ ದ. ಕೊರಿಯಾಗೆ ತೆರಳುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ (ಶಂಭು), ಪಾರ್ವತಿ (ದಿವ್ಯಾ) ದಂಪತಿ ಪುತ್ರಿ ಭವಾನಿ ಶಾಲಾ ದಿನಗಳಲ್ಲಿಯೇ ಕ್ರೀಡೆ, ಎನ್‌ಸಿಸಿಯತ್ತ ಹೆಚ್ಚಿನ ಒಲವು ಹೊಂದಿದ್ದರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್‌ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತನ್ನನ್ನು ತೊಡಗಿಸಿಕೊಳ್ಳಲು ಇನ್ನಷ್ಟು ಹಾದಿ ಸುಗಮವಾಯಿತು.
ಮೌಂಟ್ ರೂಪೇವ್ ಜ್ವಾಲಾಮುಖೀ ಪರ್ವತವಾಗಿದ್ದು, ಭವಾನಿ ಜುಲೈಯಿಂದ ಸೆಪ್ಟಂಬರ್ ತನಕ ಮೂರು ತಿಂಗಳ ಕಾಲದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಬಂದಿದ್ದಾರೆ.