ಮುಂಬಯಿ: ಸಂಸ್ಥೆಯ ಸದಸ್ಯರು ಭವಾನಿ ಫೌಂಡೇಶನ್ ಟ್ರಸ್ಟ್ ಸಾಮಾಜಿಕ ಸಂಸ್ಥೆಯ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಅವರ ಕಠಿನ ಪರಿಶ್ರಮದಿಂದ ಸಂಸ್ಥೆ ಇಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಸಮಾಜ ಸೇವೆಯಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಟ್ರಸ್ಟ್‌ನ ಸದಸ್ಯರ ಸೇವೆಯನ್ನು ಎಂದಿಗೂ ಮರೆಯಲು ಅಸಾಧ್ಯ ಎಂದು ಭವಾನಿ ಫೌಂಡೇಶನ್ ಟ್ರಸ್ಟ್ ಮುಂಬಯಿ ಸ್ಥಾಪಕ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿ ತಿಳಿಸಿದರು.
ಕೊರೊನಾ ಸಮಯದಲ್ಲಿ ಬಡಕು ಟುಂಬಗಳಿಗೆ ಸಹಾಯ ಹಸ್ತ ನೀಡುವಲ್ಲಿ ಭವಾನಿ ಫೌಂಡೇಶನ್‌ನ ಕಾರ್ಯ ಮಹತ್ವದಾಗಿದೆ. ಸಂಸ್ಥೆಯ ಸ್ವಯಂ ಸೇವಕ ವೃಂದದವರು ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಲೆಕ್ಕಿಸದೆ. ಅಸಹಾಯಕರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಸೂರ್ಯ ದೇವರು ಯಾವುದೇ ಪರಿಸ್ಥಿತಿ ಯಲ್ಲಿ ತನ್ನ ಕಾರ್ಯವನ್ನು ನಿಭಾಯಿ ಸುತ್ತಾನೆ. ನಾವೂ ಅದೇ ರೀತಿ ಭವಾನಿ ಫೌಂಡೇಶನ್ ಯಾವುದೇ ಸನ್ನಿವೇಶವನ್ನು ಎದುರಿಸಿಕೊಂಡು ಸಮಾಜ ಸೇವೆಯ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ಅಸಹಾಯಕರ ಬಾಳಿಗೆ ಬೆಳಕಾಗುವಂತಹ ಅನೇಕ ಯೋಜನೆಗಳು ನಮ್ಮ ಮುಂದಿದ್ದು, ಸಂಸ್ಥೆಯ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸುವ ಎಂದು ತಿಳಿಸಿದರು.
ನವಿಮುಂಬಯಿ ಜುಹಿ ನಗರದಲ್ಲಿರುವ ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಬಂಟ್ಸ್ ಸೆಂಟರ್‌ನಲ್ಲಿ ಮಾ. 19ರಂದು ನಡೆದ ಪ್ರಸಿದ್ಧ ಸಾಮಾಜಿಕ ಸೇವಾ ಸಂಸ್ಥೆ ಭವಾನಿ ಫೌಂಡೇಶನ್ ಇದರ 6ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಮಹಾರಾಷ್ಟ್ರ ಸಹಿತ ಊರಿನಲ್ಲೂ ಭವಾನಿ 0000ಫೌಂಡೇಶನ್‌ನ ಸೇವಾ ಕಾರ್ಯ ಅಪಾರವಾಗಿದೆ. ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳ ಮದುವೆಗೆ ನೆರವು, ಗೃಹ ನಿರ್ಮಾಣಕ್ಕೆ ನೆರವು, ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ, ವಿವಿಧ ಶಾಲೆಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ ಹೀಗೆ ಸಂಸ್ಥೆ ಎಲ್ಲ ಕ್ಷೇತ್ರಗಳಲ್ಲಿ ಸಹಕರಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಸಂಸ್ಥೆಯ ಸಮಾಜಪರ ಕಾರ್ಯಗಳಿಗೆ ಎಲ್ಲರ ಪ್ರೋತ್ಸಾಹ ಸದಾಯಿರಲಿ ಎಂದು ತಿಳಿಸಿದರು.
ಭವಾನಿ ಫೌಂಡೇಶನ್ ಟ್ರಸ್ಟ್ ಮುಂಬಯಿ ಅಧ್ಯಕ್ಷ ದೀಕ್ಷಿತ್ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಭವಾನಿ ಫೌಂಡೇಶನ್‌ನ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ ದರು. ಕಾರ್ಯದರ್ಶಿ ರವಿ ಉಚ್ಚಿಲ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಕರ್ನೂರು ಮೋಹನ್ ರೈ ಲೆಕ್ಕಪತ್ರ ಮಂಡಿಸಿದರು. ಲೆಕ್ಕಪತ್ರ ಮತ್ತು ವಾರ್ಷಿಕ ವರದಿಯನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಪದಾಧಿಕಾರಿಗಳಾದ ಧರ್ಮಪಾಲ ದೇವಾಡಿಗ, ನವೀನ್‌ಚಂದ್ರ ಆರ್. ಸನಿಲ…, ಈಶ್ವರ್ ಐಲ್, ಮುರಳೀಧರ ವಿಟuಲ್, ಜಿತೇಂದ್ರ ಠಾಕೂರ್, ಜತೆ ಕೋಶಾಧಿಕಾರಿ ನವೀನ್ ಶೆಟ್ಟಿ ಹಾಗೂ ಸದಸ್ಯರು ತಮ್ಮ ಅನಿಸಿಕೆ ಹಾಗೂ ಸಲಹೆ-ಸೂಚನೆಗಳನ್ನು ನೀಡಿದರು.
ಮಹಾಸಭೆಯ ಅನಂತರ ಜರಗಿದೆ ಬಹಿರಂಗ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಗೌರವಿಸ ಲಾಯಿತು. ಹಿರಿಯ ಸಾಹಿತಿ ಉಪನ್ಯಾಸಕ ಡಾ| ಜೀವಿ ಕುಲಕರ್ಣಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಉಡುಪಿಯ ಸಮಾಜ ಸೇವಕ ವಿಷ್ಣು ಶೆಟ್ಟಿ, ಸಮಾಜ ಸೇವಕರಾದ ಶೈಲೇಶ್ ಗುಪ್ತ, ದೀಪಕ್ ವಿಶ್ವಕರ್ಮ, ಯುವ ಕ್ರೀಡಾಪಟು ದಿಯಾ ನವೀನ್ ಇನ್ನ ಮೊದಲಾದ ವರನ್ನು ಸಮ್ಮಾನಿಸಲಾಯಿತು. ಸಮ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಸಮಾಜ ಸೇವಕಿ, ಬಿಜೆಪಿ ಯುವ ಮೋರ್ಚಾದ ಮೀನಾ ಎಸ್. ಕೇದಾರ್, ಝೀ-24ನ ನೀಲೇಶ್ ಕಹರೆ, ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಉಪನ್ಯಾಸಕ ಡಾ| ಜಿ. ಎನ್. ಉಪಾಧ್ಯ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಮುರಳಿ ಕೆ. ಶೆಟ್ಟಿ, ಸೇವಾ ಭಾವ ಟ್ರಸ್ಟ್‌ನ ಗೀತಾ ಶೆಟ್ಟಿ ಮತ್ತಿತರರಿದ್ದರು.
ಅಸಹಾಯಕರಿಗೆ ಸಹಾಯ ಹಸ್ತ ನೀಡುವುದೇ ನಮ್ಮ ಫೌಂಡೇಶನ್‌ನ ಮುಖ್ಯ ಉದ್ದೇಶವಾಗಿದೆ. ನಮ್ಮ ಸಂಸ್ಥೆಯ ನೌಕರ ವೃಂದದವರು ಫೌಂಡೇಶನ್ ಮೂಲಕ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರಗಳ ಮೂಲಕ ರಕ್ತ ಸಂಗ್ರಹಿಸಿ ರಕ್ತದಾನ ಮಾಡುತ್ತೇವೆ. ವೈದ್ಯಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ ಮೊದಲಾದ ಹಲವಾರು ಕಾರ್ಯಗಳಿಂದ ಅಸಹಾಯಕರ ಬಾಳಿಗೆ ಬೆಳಕನ್ನು ನೀಡುವ ಕಾರ್ಯವನ್ನು ಭವಾನಿ ಫೌಂಡೇಶನ್ ಮಾಡುತ್ತಿದೆ. ಭವಿಷ್ಯದಲ್ಲೂ ನಾವು ದೀನದಲಿತರ ಸೇವೆಯಲ್ಲಿ ಸದಾ ಕಾರ್ಯಪ್ರವೃತ್ತರಾಗಿರುತ್ತೇವೆ. ಭವಾನಿ ಫೌಂಡೇಶನ್‌ನ ಸದಸ್ಯರೆಲ್ಲರೂ ಒಂದಾಗಿ ಈ ಸೇವಾಕಾರ್ಯ ಮುಂದುವರಿಸೋಣ.
–ಜೀಕ್ಷಿತ್ ಶೆಟ್ಟಿ, ಅಧ್ಯಕ್ಷ, ಭವಾನಿ ಫೌಂಡೇಶನ್ ಟ್ರಸ್ಟ್ ಮುಂಬಯಿ
–ಚಿತ್ರ-ವರದಿ: ಸುಭಾಷ್ ಶಿರಿಯ