Advertisement

ಭಾವಾಂತರಂಗದಲ್ಲಿ ಅಲ್ಲೋಲ-ಕಲ್ಲೋಲ

06:25 PM Sep 22, 2020 | Karthik A |

ಮಲಗಿದ್ದವನನ್ನು ಒಮ್ಮೆಲೆ ಎಚ್ಚರಿಸಿತು ಮೊಬೈಲ್‌ ರಿಂಗಣ ಸದ್ದು. ಆ ಕಡೆಯಿಂದ ಮಧುರವಾದ ಹೆಣ್ಣಿನ ದನಿ.

Advertisement

ನಮಸ್ತೆ ಸರ್‌, ನಾವು ಇಂತಹದೊಂದು ಕಂಪೆನಿಯಿಂದ ಕಾಲ್‌ ಮಾಡ್ತಿರೋದು; ನಿಮಗೆ ರೂ. 49,999/-ಗಳ ಮೊತ್ತದ ವಸ್ತುಗಳು ಲಕ್ಕಿ ಡ್ರಾನಲ್ಲಿ ಆಫ‌ರ್‌ ಬಂದಿದೆ; ದಯವಿಟ್ಟು ನಿಮ್ಮ ವಿಳಾಸ ಹೇಳಿ ಸರ್‌ ಎಂದು ಒಂದೇ ಉಸಿರಿನಿಂದ ಹೇಳಿದಳು.

ನಾನು ಅದನ್ನೆಲ್ಲಾ ಕೇಳುತ್ತಾ ಅಷ್ಟೊತ್ತು ಸುಮ್ಮನಿದ್ದೆ. ಅನಂತರ ಅವರಿಗೆ ನಾನೇನಾದರೂ ಅಮೌಂಟ್‌ ಕೊಡಬೇಕಾ? ಎಂದೆ. ಅಷ್ಟಕ್ಕೆ ಕುರಿ ಹಳ್ಳಕ್ಕೆ ಬೀಳ್ತಿದೆ ಅನ್ನೋ ಆಸೆಯಿಂದ ಹೌದು ಸರ್‌, ಕೇವಲ ಕೋರಿಯರ್‌ ಚಾರ್ಜ್‌ಸ್‌ ಅಂತ 2,499/- ಕೊಟ್ರೆ ಸಾಕು ಎಂದರು.
ಅದಾಗಲೇ ಇದೆಲ್ಲಾ ವ್ಯಾಪಾರಿ ಬುದ್ಧಿ ಎಂದರಿತ ನಾನು, ಆಫ‌ರ್‌ ಬಂದಿರೋದಾದ್ರೆ ಉಚಿತವಾಗಿ ಕೋಡೋದಾದ್ರೆ ಕೊಡಿ, ಇಲ್ಲ ಬೇಡ ಎಂದೆ. ಅದಕ್ಕೆ ಅವರು ನೋಡಿ ಸರ್‌ ಯೋಚನೆ ಮಾಡಿ ಆಫ‌ರ್‌ ಮಿಸ್‌ ಮಾಡ್ಕೋತೀರಾ ಎಂದರು. ನಾನು ಪರವಾಗಿಲ್ಲ ಎಂದೆ; ತಕ್ಷಣವೇ ಕಾಲ್‌ ಡಿಸ್‌ಕನೆಕ್ಟ್ ಆಯ್ತು.

ಇದೆಲ್ಲ ನಡೆದದ್ದು ಮೂರು ನಿಮಿಷದ ಮಾತುಕತೆ ಅಷ್ಟೇ.
ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದವನನ್ನು ಈ ಮೂರು ನಿಮಿಷ ನಿದ್ದೆಯನ್ನೇ ಹೊಡೆದೋಡಿಸಿತ್ತು. ಮನಸ್ಸಿನ ಭಾವಾಂತರಂಗವು ಒಂದಷ್ಟು ಕದಡಿತ್ತು. ವ್ಯಾಪಾರ ಎಂಬ ಕುದುರೆಯನ್ನು ಹೆಣ್ಣಿನ ಮಧುರ ದನಿಯಿಂದ ಮರುಳು ಮಾಡಿ ಓಟ ಆರಂಭಿಸಿ ಮರುಳು ಮಾಡುವ ಅದೆಷ್ಟೋ ಜನರಿದ್ದಾರೆ. ಹಾಗೆಯೇ ಮರುಳಾಗುವ ಮಂದಿಯೂ ಅದೆಷ್ಟೋ..? ಇಂತಹ ಅದೆಷ್ಟೋ ಘಟನೆಗಳು ನಮ್ಮೆಲ್ಲರ ಬದುಕಿನಲ್ಲಿ ನಡೆಯುತ್ತಿವೆ. ಕೆಲವರು ಯಾಮಾರಿ ಹಣ ಕಳೆದುಕೊಂಡವರಿದ್ದಾರೆ; ಕಡಿಮೆ ಬೆಲೆಯ ವಸ್ತುಗಳಿಗೆ ದುಬಾರಿ ಬೆಲೆ ಕೊಟ್ಟವರಿದ್ದಾರೆ; ಒಟ್ಟಿನಲ್ಲಿ ವ್ಯಾಪಾರದ ಬುದ್ಧಿವಂತಿಕೆಯ ಮುಂದೆ ಸೋತವರೇ ಇದ್ದಾರೆ. ಗೆದ್ದವರೂ ಇದ್ದಾರೆ. ಆದರೆ ಪಾಪ ಅಮಾಯಕ ಜನರು ಇಂತಹ ಮರುಳು ಮಾತಿಗೆ ಬಲಿಯಾದರೆ ಅವರನ್ನು ಕಾಪಾಡುವರು ಯಾರು?

ಮನಸ್ಸಿನ ಭಾವನೆಗಳ ಜತೆಗೆ ನಡೆಯುವ ಇಂತಹ ಅನಿರೀಕ್ಷಿತ ಘಟನೆಗಳು ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿಬಿಡುತ್ತವೆ. ನಿಜವಾಗಿಯೂ ಅಂತ ಆಫ‌ರ್‌ ನನಗೆ ಸಿಕ್ಕಿದೆಯಾ? ನಾನೇನಾದರೂ ಮೋಸದ ಜಾಲಕ್ಕೆ ಸಿಲುಕಿಕೊಳ್ಳುತ್ತಿದ್ದೇನಾ? ಹೀಗೆ ನಾನಾ ಯೋಚನೆಗಳು ಒಮ್ಮೆಲೆ ಮನಸ್ಸನ್ನು ಆವರಿಸಿ ಇಂತಹ ವಿಚಾರಕ್ಕೆ ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತೇವೆ. ಇದರಿಂದ ನಮ್ಮ ನೆಮ್ಮದಿಯ ಕ್ಷಣಗಳು ದಿಕ್ಕಾಪಾಲಾಗುವುದಂತೂ ಖಚಿತ. ಈ ನಿಟ್ಟಿನಲ್ಲಿ ನಾವು ಒಂದಿಷ್ಟು ಜಾಗೃತರಾಗಿರುವುದಷ್ಟೇ ಅಲ್ಲದೆ ನಮ್ಮ ಮನಸ್ಸನ್ನು ಕೂಡ ಗಟ್ಟಿಗೊಳಿಸಿಕೊಳ್ಳಬೇಕು; ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಬದುಕೆಂದರೆ ಎಲ್ಲವೂ ಆಕಸ್ಮಿಕ. ನಾವು ಊಹಿಸಿದಂತೆ ನಡೆಯುವ ಬದುಕೇ ನಮಗೆ ಸಿಗುವಂತಿದ್ದರೆ ಮತ್ತಿನ್ನೇನು..!! ಜೀವನವೆಲ್ಲ ಏಳುಬೀಳುಗಳ ಸಂತೆ. ಇದರಲ್ಲಿ ಬಂದ ಎಲ್ಲವನ್ನೂ ಸ್ವೀಕರಿಸಬೇಕು; ಎದುರಿಸುತ್ತಾ, ದಾಟುತ್ತಾ ಮುನ್ನಡೆಯಬೇಕು.

Advertisement

ನಮ್ಮ ವ್ಯಕ್ತಿತ್ವದಂತೆ ನಮ್ಮ ಬದುಕಾಗುತ್ತದೆ. ಒಳ್ಳೆಯ ಸಕಾರಾತ್ಮಕ ಯೋಚನೆ, ಚಿಂತನೆ, ಓದು, ಬರಹ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಜತೆಗೆ ಬದುಕಿನ ಹಾದಿ ಕೂಡ ತೆರೆದುಕೊಳ್ಳುತ್ತಾ ಸಾಗುತ್ತದೆ. ಹಾಗಾಗಿ ಬದುಕಿನಲ್ಲಿ ಎಚ್ಚರಿಕೆಯೂ ಅಗತ್ಯ. ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳ ಬಗ್ಗೆ ಚಿಂತಿಸಿದೆ ಮನಸ್ಸನ್ನು ಅಲ್ಲೋಲ ಕಲ್ಲೋಲವನ್ನಾಗಿಸದೆ ಧೈರ್ಯವಾಗಿ ಆತ್ಮವಿಶ್ವಾಸದಿಂದ ಎದುರಿಸಿ ಮುನ್ನಡೆಯಿರಿ. ಬದುಕು, ಮನಸ್ಸು ನಿರಾಳವಾಗುತ್ತದೆ.

 ಲಕ್ಷ್ಮೀಕಾಂತ್‌ ಎಲ್‌. ವಿ. ತುಮಕೂರು ವಿ.ವಿ., ತುಮಕೂರು 

 

 

Advertisement

Udayavani is now on Telegram. Click here to join our channel and stay updated with the latest news.

Next