Advertisement

ಭವಾನಿ ಫೌಂಡೇಶನ್‌ ಮುಂಬಯಿ ಆಶ್ರಯದಲ್ಲಿ ಬೃಹತ್‌ ರಕ್ತದಾನ ಶಿಬಿರ

03:31 PM Feb 08, 2017 | |

ಮುಂಬಯಿ: ಸಮಾಜ ಸೇವಾ ಸಂಸ್ಥೆ ಭವಾನಿ ಫೌಂಡೇಶನ್‌ ಆಶ್ರಯದಲ್ಲಿ ಫೆ. 4ರಂದು ಬೆಳಗ್ಗೆಯಿಂದ ಸಂಜೆಯವರೆಗೆ ದ್ವಿತೀಯ ರಕ್ತದಾನ ಶಿಬಿರವು ಮಹಾತ್ಮಾ ಗಾಂಧಿ ಮಿಷನ್ಸ್‌ ಮೆಡಿಕಲ್‌ ಕಾಲೇಜು ಹಾಸ್ಪಿಟಲ್‌ ಬ್ಲಿಡ್‌ ಬ್ಯಾಂಕ್‌ ಕಾಮೋಟೆ ನವಿಮುಂಬಯಿ ಇದರ ಸಹಕಾರದೊಂದಿಗೆ ಸಿಬಿಡಿ ಬೇಲಾಪುರದ ಟೈಮ್ಸ್‌ ಸ್ಕ್ವೇರ್‌ ಸಂಕೀರ್ಣದ ಗಾರ್ಡನ್‌ ಹಾಲ್‌ನಲ್ಲಿ ಯಶಸ್ವಿಯಾಗಿ ಜರಗಿತು.

Advertisement

ಭವಾನಿ ಫೌಂಡೇಶನ್‌ ಅಧ್ಯಕ್ಷ, ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ ಭವಾನಿ ಫೌಂಡೇಶನ್‌ ಪದಾಧಿಕಾರಿಗಳು, ವಿಶ್ವಸ್ತರು, ಸಿಬಿಡಿ ಹಾಗೂ ನೆರೂಲ್‌ನ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ನೀಡಿದರು. ರಕ್ತದಾನ ಶಿಬಿರದಲ್ಲಿ ಸುಮಾರು 121 ಯುನಿಟ್‌ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು.

ಮಹಾತ್ಮಾ ಗಾಂಧಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಡಾ| ಶಿಲ್ಲಿ ವರ್ಗೀಸ್‌, ಸಮನ್ವಯಕರಾದ ರವೀಂದ್ರ ಅತ್ತಾರ್ದೆ ತಂಡದ ಸುಮಾರು 16 ಮಂದಿ ವೈದ್ಯರು, ಸಿಬಂದಿ ರಕ್ತದಾನ ಶಿಬಿರದಲ್ಲಿ ಸಹಕರಿಸಿದರು. ಮುಖ್ಯ ಅತಿಥಿಗಳಾದ ಭಾರತೀಯ ರೈಲ್ವೇ ಅಂಗ ಸಂಸ್ಥೆಯಾದ ಕಂಟೇನರ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾದ ಜಂಟಿ ಮಹಾಪ್ರಬಂಧಕ ಅನಿಲ್‌ ಸೋನಾವಣೆ, ಮುಂಬಯಿಯ ಹಿರಿಯ ನ್ಯಾಯವಾದಿ, ಭವಾನಿ ಫೌಂಡೇಶನ್‌ ಇದರ ವಿಶ್ವಸ್ತ ಹಿರಿಯರಾದ ಮೊಹಿದ್ದೀನ್‌ ಮುಂಡ್ಕೂರು, ಸಕಾಳ್‌ ಮರಾಠಿ ಪತ್ರಿಕೆಯ ಸಂಪಾದಕ ಮಂಡಳಿಯ ಅತುಲ್‌ಜೀ ಅವರು ಶಿಬಿರಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿ ಅನಿಲ್‌ ಸೋನಾವಣೆ ಅವರು ಮಾತನಾಡಿ, ಸಾಮಾಜಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಕೆ. ಡಿ. ಶೆಟ್ಟಿ ಅವರಂತಹ ಹೃದಯ ಸಂಪನ್ನರು ದೇಶದ ಬಹುದೊಡ್ಡ ಆಸ್ತಿ ಎಂದು ಅಭಿಮಾನದಿಂದ ನುಡಿದರು. ತನ್ನ ತಾಯಿಯ ಸ್ಮೃತಿಗಾಗಿ ಕೆ. ಡಿ. ಶೆಟ್ಟಿ ಅವರು ಸ್ಥಾಪಿಸಿದ ಸಾಮಾಜಿಕ ಸಂಸ್ಥೆ ಮಾನವೀಯ ನೆಲೆಯಲ್ಲಿ ಗುರುತರವಾದ ಕಾರ್ಯಚಟುವಟಿಕೆಗಳನ್ನು ನಡೆಸಿ ಮಹಾರಾಷ್ಟ್ರದಾದ್ಯಂತ ಗುರುತಿಸಿ ಕೊಂಡಿದೆಯಲ್ಲದೆ,  ಮುಂದಿನ  ದಿನಗಳಲ್ಲಿ ಈ ಸಂಸ್ಥೆ ಕಾರ್ಯ ದೇಶವ್ಯಾಪಿ ಹರಡಲಿ ಎಂದು ಹಾರೈಸಿದರು.

ನ್ಯಾಯವಾದಿ ಮೊಹಿ ದ್ದೀನ್‌ ಮುಂಡ್ಕೂರು ಅವರು ಮಾತನಾಡಿ, ಜನತಾ  ಸೇವೆಯೇ ಜನಾರ್ದನ ಸೇವೆ ಎಂಬ ಧ್ಯೇಯವಾಕ್ಯವನ್ನು ಸದಾ ಪಾಲಿಸಿಕೊಂಡು ಬಂದಿರುವ ಕೆ. ಡಿ. ಶೆಟ್ಟಿ ಅವರು ಲೋಕ   ಕಲ್ಯಾಣಕ್ಕಾಗಿಯೇ ಸ್ಥಾಪಿಸಿದ ಮಹಾನ್‌ ಸಂಸ್ಥೆ ಭವಾನಿ ಫೌಂಡೇಶನ್‌ ಆಗಿದೆ.  ಬಿಡುವಿಲ್ಲದ ತನ್ನ ವ್ಯವಸಾಯದ ಜತೆಗೂ ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಾ ಅತ್ಮತೃಪ್ತಿ ಕಂಡು ಕೊಳ್ಳುತ್ತಿರುವಂತಹ ಕೆ. ಡಿ. ಶೆಟ್ಟಿ ಅವರು ನಿಜವಾಗಿಯೂ ಅಭಿನಂದನೀಯರು. ಸಂಸ್ಥೆಯಿಂದ ಇನ್ನಷ್ಟು ಸಮಾಜ ಸೇವೆ ನಡೆಯುವಂತಾಗಲಿ ಎಂದರು.

Advertisement

ಅಧ್ಯಕ್ಷತೆ ವಹಿಸಿದ ಕೆ. ಡಿ. ಶೆಟ್ಟಿ ಅವರು, ಭವಾನಿ ಫೌಂಡೇಷನ್‌ ಇದರ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ತಾಯಿಯ ಆಶೀರ್ವಾದ, ದೇವರ ಅನು ಗ್ರಹದಿಂದ ಇದೆಲ್ಲವೂ ಸಾಧ್ಯವಾಗಿದೆ. ಯಾವುದೇ ಸೇವೆ ಎಂಬುದು ಹೃದಯ ದೊಳಗೆ ತಟ್ಟಿ ಜನತೆಗೆ ಮುಟ್ಟುವ ಪ್ರಯತ್ನ ನಡೆದರೆ ಆ ಸೇವೆ ಸಾರ್ಥಕ. ಪ್ರತಿ ಫಲಾಪೇಕ್ಷೆಯಿಲ್ಲದ ಸೇವೆಗೆ ಭಗವಂತನ ಕೃಪೆ ಇದ್ದೇ ಇದೆ. ಇಂದು ರಕ್ತದಾನದಲ್ಲಿ ಸೇರಿದ ಪ್ರತಿಯೊಬ್ಬರೂ ಇನ್ನೊಬ್ಬರ ಬದುಕಿನ ಉಳಿವಿಗಾಗಿ ಮುಂದೆಬಂದು ರಕ್ತ ನೀಡಿದ್ದಾರೆ. ನಾವೂ ಬದುಕಬೇಕು, ಇನ್ನೊಬ್ಬರನ್ನು ಬದುಕಿಸುವ ಕಾರ್ಯವನ್ನು ನಾವು ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಮಿಷನ್ಸ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಪರವಾಗಿ, ಭವಾನಿ ಫೌಂಡೇಶನ್‌ನ ಸೇವಾ ಕಾರ್ಯಕ್ಕಾಗಿ ಮೆಚ್ಚುಗೆಯ ಪ್ರಮಾಣಪತ್ರವನ್ನು ಅಧ್ಯಕ್ಷ ಕೆ. ಡಿ. ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಭವಾನಿ ಫೌಂಡೇಷನ್‌ನ ಗೌರವ ಕಾರ್ಯದರ್ಶಿ ರಾಜಲಕ್ಷ್ಮೀ ಸುಬ್ರಹ್ಮಣ್ಯಂ ಆರಂಭದಲ್ಲಿ ಸ್ವಾಗತಿಸಿ ವಂದಿಸಿದರು.

ಫೌಂಡೇಷನ್‌ನ ಉಪಾಧ್ಯಕ್ಷ ಜೀಕ್ಷಿತ್‌ ಕೆ. ಶೆಟ್ಟಿ ದಂಪತಿ, ಗೌರವ ಕೋಶಾಧಿಕಾರಿ ಸರಿತಾ ಕೆ. ಶೆಟ್ಟಿ, ಸಂಜೀವ ಶೆಟ್ಟಿ ಅಶ್ವಿ‌ತ್‌, ಕ್ಯಾಪ್ಟನ್‌ ಸುಖ್‌ದೇವ್‌ ಸಿಂಘ ಬಾಮ, ವಿಶ್ವಸ್ಥರಾದ ನವೀನ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ಸುರೇಂದ್ರ ಶೆಟ್ಟಿ, ರಾಘವ ಶೆಟ್ಟಿ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗುಣವತಿ ಶೆಟ್ಟಿ, ನೆರೂಲ್‌ ಶ್ರೀ ಮಣಿಕಂಠ ಸೇವಾ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next