ಕನ್ನಡ ಚಿತ್ರರಂಗದಲ್ಲಿ ಆಗಾಗ ಹೊಸ ಪ್ರಯೋಗಗಳು ಆಗುತ್ತಿರುತ್ತವೆ. ಅದು ಕಥೆಯಿಂದ ಹಿಡಿದು ನಿರ್ಮಾಣ ಸಂಸ್ಥೆವರೆಗೂ. ಈಗ ಅಂತಹುದೇ ಒಂದು ಹೊಸ ಅಂಶದೊಂದಿಗೆ ಕನ್ನಡ ಚಿತ್ರರಂಗದ ಇಬ್ಬರು ನಿರ್ದೇಶಕರು ಸುದ್ದಿಯಲ್ಲಿದ್ದಾರೆ. ಅದು ನಿರ್ದೇಶಕರಾದ ಯೋಗರಾಜ್ ಭಟ್ ಹಾಗೂ ಶಶಾಂಕ್. ಈ ಇಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಇಬ್ಬರೂ ನಿರ್ದೇಶಕರು. ಹೇಗೆ ಜೊತೆಯಾಗಿ ಸಿನಿಮಾ ಮಾಡುತ್ತಾರೆಂದು ನೀವು ಕೇಳಬಹುದು.
ಯೋಗರಾಜ್ ಭಟ್ ಅವರ ಯೋಗರಾಜ್ ಸಿನಿಮಾಸ್ ಹಾಗೂ ಶಶಾಂಕ್ ಅವರ ಶಶಾಂಕ್ ಸಿನಿಮಾಸ್ ಜಂಟಿಯಾಗಿ ಸಿನಿಮಾವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಇಬ್ಬರ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ರಿಷಿ ನಾಯಕರಾಗಿ ನಟಿಸಲಿದ್ದಾರೆ. ಈ ಚಿತ್ರವನ್ನು ಮೋಹನ್ ಸಿಂಗ್ ನಿರ್ದೇಶಿಸಲಿದ್ದಾರೆ. ಯೋಗರಾಜ್ ಭಟ್ ಹಾಗೂ ಶಶಾಂಕ್ ಬಳಿ ಕೆಲಸ ಮಾಡಿ ಅನುಭವವಿರುವ ಮೋಹನ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಈ ಸಿನಿಮಾಕ್ಕೆ ಭಟ್ಟರು ಕೇವಲ ಬ್ಯಾನರ್‌ನಲ್ಲಷ್ಟೇ ಕೈ ಜೋಡಿಸಿಲ್ಲ. ಬದಲಾಗಿ ಕಥೆಯನ್ನು ನೀಡಿದ್ದಾರೆ. ಭಟ್ಟರ ಕಥೆಯನ್ನಿಟ್ಟುಕೊಂಡು ಮೋಹನ್ ಸಿನಿಮಾ ಮಾಡಲಿದ್ದಾರೆ. ಚಿತ್ರ ಜೂನ್‌ನಲ್ಲಿ ಶುರುವಾಗಲಿದೆ. ಈ ಚಿತ್ರದ ಬಗ್ಗೆ ಮಾತನಾಡುವ ಯೋಗರಾಜ್ ಭಟ್, “ನಾನು, ಶಶಾಂಕ್ ಒಳ್ಳೆಯ ಸ್ನೇಹಿತರು. ಹಲವು ವರ್ಷಗಳಿಂದ ಏನಾದರೂ ಮಾಡಬೇಕು ಎಂದು ಮಾತನಾಡುತ್ತಿದ್ದೆವು. ಈಗ ಆ ಸಂದರ್ಭ ಕೂಡಿಬಂದಿದೆ.
ನನ್ನ ಯೋಗರಾಜ್ ಸಿನಿಮಾಸ್ ಹಾಗೂ ಅವರ ಶಶಾಂಕ್ ಸಿನಿಮಾಸ್ ಜೊತೆಯಾಗಿ ಸಿನಿಮಾ ಮಾಡುತ್ತಿದೆ. ಒಟ್ಟಾಗಿ ಸಿನಿಮಾ ಮಾಡುತ್ತಿರುವುದು ಖುಷಿ ಕೊಟ್ಟಿದೆ’ ಎನ್ನುವುದು ಭಟ್ಟರ ಮಾತು. ಇನ್ನು, ಶಶಾಂಕ್ ಕೂಡಾ ಈ ಬಗ್ಗೆ ಖುಷಿಯಾಗಿದ್ದಾರೆ. “ಮಲ್ಟಿಸ್ಟಾರ್ ಸಿನಿಮಾ ತರಹ ಇಬ್ಬರು ನಿರ್ದೇಶಕರು ಒಟ್ಟಾಗಿ ಸಿನಿಮಾ ಮಾಡುತ್ತಿದ್ದೇವೆ. ಎಲ್ಲರಿಗೂ ಖುಷಿಕೊಡುವಂತಹ ಸಿನಿಮಾ ಇದಾಗಲಿದೆ ಎಂಬ ನಂಬಿಕೆ ನಮಗಿದೆ’ ಎನ್ನುತ್ತಾರೆ ಶಶಾಂಕ್.
ಅಂದಹಾಗೆ, ಯೋಗರಾಜ್ ಭಟ್ ಹಾಗೂ ಶಶಾಂಕ್ ಇಬ್ಬರು ನಿರ್ದೇಶಕರು ಕೂಡಾ “ಮುಂಗಾರು ಮಳೆ’ಗೆ ಸಾಕ್ಷಿಯಾಗಿದ್ದಾರೆ. “ಮುಂಗಾರು ಮಳೆ’ ಚಿತ್ರವನ್ನು ಭಟ್ಟರು ನಿರ್ದೇಶನ ಮಾಡಿದರೆ, “ಮುಂಗಾರು ಮಳೆ-2′ ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ “ಪಂಚತಂತ್ರ’ ಬಿಡುಗಡೆಗೆ ಸಿದ್ಧವಾಗಿದ್ದು, “ಗಾಳಿಪಟ-2′ ಚಿತ್ರೀಕರಣಕ್ಕೆ ಅಣಿಯಾಗಿದೆ. ಇತ್ತ ಕಡೆ ಶಶಾಂಕ್ ಅವರು ಉಪೇಂದ್ರ ಜೊತೆ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ.