ಭಟ್ಕಳ: ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಶುಕ್ರವಾರ ಸ್ವಲ್ಪ ಬಿಡುವು ದೊರೆತಿದ್ದು ಜನರು ನಿಟ್ಟುಸಿರು ಬಿಡುವಂತಾಯಿತು. ಶಾಲೆಗೆ ರಜೆ ಕೊಟ್ಟಿದ್ದರಿಂದ ಮಳೆಯಿಲ್ಲದಿದ್ದರೂ ರಸ್ತೆಯಲ್ಲಿ ಸಂಚಾರ ವಿರಳವಾಗಿತ್ತು.
ಕಳೆದ ಮರ‍್ನಾಲ್ಕು ದಿನಗಳಿಂದ ಎಲ್ಲೆಂದರಲ್ಲಿ ನೀರು ತುಂಬಿಕೊಂಡಿದ್ದೇ ಕಾಣುತ್ತಿದ್ದರೆ ಇಂದು ನೀರಿನ ಪ್ರಮಾಣ ತಗ್ಗಿದ್ದು ಸ್ವಲ್ಪ ಸಮಾಧಾನ ತರುವಂತಿತ್ತು.
ಗುರುವಾರ ಸಂಜೆ ಸಚಿವ ಮಂಕಾಳ ವೈದ್ಯ ಐಆರ್‌ಬಿ, ಹೆದ್ದಾರಿ ಪ್ರಾಧಿಕಾರ, ಪುರಸಭೆಯ ಅಧಿಕಾರಿಗಳಿಗೆ ಹೆದ್ದಾರಿಯ ಮೇಲೆ ನೀರು ನಿಲ್ಲುವ ಕುರಿತು ಹಿಗ್ಗಾಮುಗ್ಗಾ ಝಾಢಿಸಿದ್ದರಿಂದ ಇಂದು ಬೆಳಿಗ್ಗೆಯಿಂದಲೇ ಐ.ಆರ್.ಬಿ. ಕಂಪೆನಿಯ ಜೆ.ಸಿ.ಬಿ. ಕಾಣಿಸಿಕೊಂಡಿದೆ. ಮಳೆ ನೀರು ಹರಿದು ಹೋಗಲು ಗಟಾರ ಬಿಡಿಸಿಕೊಡುವ ಕೆಲಸಕ್ಕೆ ಚಾಲನೆ ಸಿಕ್ಕಿತ್ತು. ಪುರಸಭೆಯವರೂ ಸಹ ತಾಲೂಕು ಪಂಚಾಯತ್, ಪಿಎಲ್‌ಡಿ ಬ್ಯಾಂಕ್ ಎದುರು ಮತ್ತಿತರ ಕಡೆ ಜೆಸಿಬಿ ಸಹಾಯದಿಂದ ನೀರು ಸರಾಗವಾಗಿ ಹರಿದು ಹೋಗಲು ಗಟಾರ ಬಿಡಿಸುವ ಕೆಲಸ ಮಾಡಿದರು.
ಸಚಿವರು ಅಧಿಕಾರಿಗಳ ಸಭೆಯಲ್ಲಿ ಈ ಹಿಂದೆ ಮಳೆಗಾಲಕ್ಕೂ ಮೂರು ತಿಂಗಳ ಮೊದಲು ಜಿಲ್ಲಾಧಿಕಾರಿಗಳು ಸಭೆ ಮಾಡಿ ಮಳೆಗಾಲಕ್ಕೆ ಮೊದಲು ತಯಾರಿ ಮಾಡಿಕೊಳ್ಳಲು ಹೇಳಿದ್ದರೂ ಸಹ ಎನೂ ಮಾಡದೇ ಹೆದ್ದಾರಿಯಲ್ಲಿ ಹೊಳೆಯಾಗುವಂತೆ ಮಾಡಿದ್ದೀರಲ್ಲ ಎಂದು ಅಧಿಕಾರಿಗಳನ್ನು, ಐ.ಆರ್.ಬಿ.ಯವರನ್ನು ಪ್ರಶ್ನಿಸಿದ್ದಲ್ಲದೇ ಯಾವುದೇ ಅಧಿಕಾರಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಜಿಲ್ಲೆಯಿಂದ ಹೊರಗೆ ವರ್ಗ ಮಾಡಿಕೊಂಡು ಹೋಗುವುದಕ್ಕೆ ತಾನೇ ಅನುಮತಿ ನೀಡುತ್ತೇನೆ ಎಂದಿದ್ದು ಪುರಸಭಾ ಅಧಿಕಾರಿಗಳಾದಿಯಾಗಿ ಎಲ್ಲರಿಗೂ ಬಿಸಿ ಮುಟ್ಟಿತ್ತು.
ಭಟ್ಕಳದಲ್ಲಿ ನೀರು ತುಂಬಿಕೊಳ್ಳಲು ಪುರಸಭೆಯವರ ನಿರ್ಲಕ್ಷ ಕೂಡಾ ಇದೆ ಎನ್ನುವುದನ್ನು ಇನಾಯತ್‌ವುಲ್ಲಾ ಶಾಬಂದ್ರಿ ತಿಳಿಸಿದ್ದರು.
ಪಟ್ಟಣದಲ್ಲಿ ಐಆರ್‌ಬಿಯವರು ಮಳೆಗಾಲದ ಪೂರ್ವದಲ್ಲೇ ಗಟಾರ ನಿರ್ಮಾಣ ಅಥವಾ ಸರಿಯಾಗಿ ನೀರು ಹರಿದು ಹೋಗಲು ಗಟಾರ ಬಿಡಿಸಿಕೊಡುವ ಕೆಲಸ ಮಾಡಿದ್ದರೆ ಮಳೆಗಾಲದಲ್ಲಿ ಮಳೆ ನೀರು ಹೆದ್ದಾರಿ ಮೇಲೆ ಶೇಖರಣೆ ಆಗಿ ಜನರಿಗೆ ತೊಂದರೆ ಆಗುವ ಪ್ರಶ್ನೆಯೇ ಇರುತ್ತಿರಲಿಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ. ಶುಕ್ರವಾರ ಬೆಳಿಗ್ಗೆಯಿಂದ 24 ಗಂಟೆಗಳಲ್ಲಿ 120 ಮಿಮಿ ಮಳೆಯಾಗಿದೆ.
ಇದನ್ನೂ ಓದಿ: