Advertisement

ಹಲವು ಅನುಮಾನಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕಡಲ ಕಿನಾರೆಯ ಶವಗಳು

08:53 PM Sep 19, 2021 | Team Udayavani |

ಭಟ್ಕಳ: ಶನಿವಾರ ಮಧ್ಯಾಹ್ನ ತಾಲೂಕಿನ ಹುಯಿಲಮಡಿ ಇಕೋ ಬೀಚ್ ಹತ್ತಿರದ ಸಮುದ್ರ ಕಿನಾರೆಯಲ್ಲಿ ಪತ್ತೆಯಾದ ಶವಗಳು ತಾಯಿ, ಮಗನ ಶವ ಎಂದು ತನಿಖೆಯಿಂದ ತಿಳಿದು ಬಂದಿದೆ. ಮೂಲತಃ ತೀರ್ಥಹಳ್ಳಿಯವರಾದ ಇವರು ಬೆಂಗಳೂರಿನಲ್ಲಿ ವಾಸ ಮಾಡಿಕೊಂಡಿದ್ದರೆನ್ನಲಾಗಿದೆ. ಈಗಾಗಲೇ ತಂದೆ ತೀರಿಕೊಂಡಿದ್ದು ಉದ್ಯೋಗದಲ್ಲಿದ್ದ ತಾಯಿ ಕೆಲಸವನ್ನು ಬಿಟ್ಟಿದ್ದು,  ಮಗ ಆದಿತ್ಯ ಬೆಂಗಳೂರಿನಲ್ಲಿಯೇ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Advertisement

ಬೆಂಗಳೂರಿನಲ್ಲಿರುವ ಇವರ ಬಾಡಿಗೆ ಮನೆಯ ಮಾಲೀಕರಿಗೆ ಸುದ್ದಿ ತಿಳಿದ ತಕ್ಷಣ ಅವರು ತೀರ್ಥಹಳ್ಳಿಯಲ್ಲಿರುವ ಲಕ್ಷ್ಮೀಅವರ ಸಹೋದರರಿಗೆ ದೂರವಾಣಿ ಕರೆ  ಮಾಡಿ ತಿಳಿಸಿದ್ದು, ತೀರ್ಥಹಳ್ಳಿಯಿಂದ ಬಂದಿದ್ದ ಲಕ್ಷ್ಮೀ ಅವರ ಸಹೋದರ ಹಾಗೂ ಇತರರು ಶವದ ಗುರುತು ಪತ್ತೆ ಹಚ್ಚಿದ್ದು, ಸಾವಿಗೆ ನಿಖರವಾದ ಕಾರಣ ಅವರಿಗೆ ತಿಳಿದಿಲ್ಲ ಎನ್ನಲಾಗಿದೆ. ನಂತರ ಅವರು ಭಟ್ಕಳದಲ್ಲಿಯೇ ಅಂತ್ಯಕ್ರಿಯೆನ್ನು ಮುಗಿಸಿ ವಾಪಾಸು ಹೋಗಿದ್ದಾರೆನ್ನಲಾಗಿದೆ.

ಮೃತ ಪಟ್ಟಿದ್ದ ಆದಿತ್ಯ ಹಾಗೂ ತಾಯಿ ಲಕ್ಷ್ಮೀ  ಅವರು ಕಳೆದ ಸೆ.14ರಂದು ಬೆಂಗಳೂರಿನಿಂದ ರೈಲಿನ ಮೂಲಕ ಮುರ್ಡೇಶ್ವರಕ್ಕೆ ಬಂದು ಅಲ್ಲಿನ ವಸತಿ ಗೃಹದಲ್ಲಿ ಒಂದು ದಿನ ತಂಗಿದ್ದರೆನ್ನಲಾಗಿದೆ. ಬರುವಾಗ ತಾಯಿ ಮಗ ಒಟ್ಟು ಒಂದು ಬ್ಯಾಗ್ ಮಾತ್ರ ತಂದಿದ್ದು, ಕಾರನ್ನು ಹೊಂದಿದ್ದರೂ ಕೂಡಾ ರೈಲಿನಲ್ಲಿ ಬಂದಿರುವುದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಎನ್ನುವ ಸಂಶಯ ಕೂಡಾ ಬರುತ್ತಿದೆ.  ಸೆ.15ರಂದು ಬುಧವಾರ ಬೆಳಿಗ್ಗೆ ವಸತಿ ಗೃಹದಿಂದ ಹೊರಟವರು ನೇರವಾಗಿ ಹುಯಿಲು ಮಡಿಗೆ ಹೋಗಿರುವ ಶಂಕೆ ಇದ್ದು ಅಂದೇ ಸಂಜೆಯೋಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಕುರಿತು ತಿಳಿದು ಬರುತ್ತದೆ. ತಾಯಿಯ ಶವ ಕಲ್ಲುಬಂಡೆಯ ಮೇಲೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿದ್ದು, ಮಗನ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಾ ಸ್ವಲ್ಪ ಅನುಮಾನಕ್ಕೆ ಕಾರಣವಾಗಿದೆ. ತಾಯಿ ಬಂಡೆಕಲ್ಲಿನ ಮೇಲೆ ಬಿದ್ದ ಸ್ಥಿತಿಯಲ್ಲಿ ಮೃತ ಪಡಲು ಕಾರಣ ಏನು ಎನ್ನುವ ಕುರಿತೂ ತನಿಖೆ ಮಾಡಬೇಕಾಗಿದೆ.

ಹುಯಿಲುಮಡಿ ಬೀಚನ್ನು ನೋಡಲು ಹೋಗಿ ಅಕಸ್ಮಾತ್ ಕಾಲುಜಾರಿ ಬಿದ್ದು ಮೃತ ಪಟ್ಟ ತಾಯಿಯ ಸ್ಥಿತಿಯನ್ನು ನೋಡಲಾಗದೇ ಈತ ನೇಣು ಬಿಗಿದುಕೊಂಡು ಮೃತಪಟ್ಟನೇ? ತಾಯಿಯನ್ನು ತಳ್ಳಿ ಮೃತಪಟ್ಟ ನಂತರ ಈತ ಆತ್ಮಹತ್ಯೆಗೆ ಶರಣಾದನೇ? ಯಾವುದೂ ಕೂಡಾ ಸ್ಪಷ್ಟವಿಲ್ಲವಾಗಿದ್ದು ಇನ್ನಷ್ಟೇ ಬೆಂಗಳೂರಿನಲ್ಲಿರುವ ಮನೆಯ ಅಕ್ಕಪಕ್ಕದವರು, ಆತನು ಕೆಲಸ ಮಾಡುತ್ತಿರುವ ಕಂಪೆನಿಯ ಸಹೋದ್ಯೋಗಿಗಳನ್ನು ವಿಚಾರಿಸಿದಾಗ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ಆತ್ಮಹತ್ಯೆಗೆ ಮಗನಿಗೆ ಮದುವೆಯಾಗಿಲ್ಲ ಎನ್ನುವ ಕೊರಗು ಕಾರಣವೇ ಇಲ್ಲ ಹಣಕಾಸು ವಿಚಾರವಾಗಿ ಸ್ಥಳೀಯವಾಗಿ ಬೆಂಗಳೂರಿನಲ್ಲಿ ಯಾರಾದರೂ ಬೆದರಿಕೆ ಹಾಕಿದ್ದರೇ ಎನ್ನುವ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next