ಭಟ್ಕಳ: ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅನೇಕ ಕಡೆಗಳಲ್ಲಿ ತೀವ್ರ ಹಾನಿಯಾಗಿದ್ದು, ಹಳ್ಳ, ಕೊಳ್ಳ, ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಅನೇಕ ಮನೆಗಳು, ತೋಟ, ಗದ್ದೆಗಳು ಅಪಾಯದಲ್ಲಿವೆ.
ಜು. 23ರ ರವಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳಲ್ಲಿ ತಾಲೂಕಿನಲ್ಲಿ 133.4 ಮಿ.ಮಿ. ಮಳೆಯಾಗಿದ್ದು ಒಟ್ಟು ಇಲ್ಲಿಯ ತನಕ 2229.1 ಮಿ.ಮಿ. ಮಳೆಯಾದಂತಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೋಣಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂಡಿನಕಟ್ಟು ಹೊಳೆಯ ನೀರು ತೋಟಕ್ಕೆ ನುಗ್ಗಿ ಸುಮಾರು ಅರ್ಧ ಎಕರೆಯಷ್ಟು ತೋಟ ಕೊಚ್ಚಿ ಹೋಗಿದ್ದು ವೆಂಕಟರಮಣ ಹೆಬ್ಬಾರ್ ಎನ್ನುವವರ ತೋಟದ ಅಡಿಕೆ, ತೆಂಗಿನ ಮರಗಳು ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಗೂಡಿನಕಟ್ಟು ಹಳ್ಳಕ್ಕೆ ಅವೈಜ್ಞಾನಿಕವಾದ ರೀತಿಯಲ್ಲಿ ಬಾಂದಾರ ನಿರ್ಮಾಣ ಮಾಡಿದ್ದು ನೀರು ಹೋಗಲು ಇಟ್ಟ ಕಿಂಡಿಗಳು ಸಂಪೂರ್ಣ ಕಸ ಕಡ್ಡಿಗಳು, ಮರಗಳ ಕೊಂಬೆಗಳಿಂದ ಕಟ್ಟಿದ್ದು ನೀರು ಹೋಗುವುದಕ್ಕೇ ಸ್ಥಳವಿಲ್ಲದೇ ತೋಟದ ಮೇಲೆಯೇ ನೀರು ಹರಿಯುತ್ತಿರುವುದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ.
ಶನಿವಾರ ರಾತ್ರಿಯಿಂದೀಚೆಗೆ ಹಳ್ಳದ ನೀರು ಮೇಲೆ ಉಕ್ಕಿ ಹರಿಯುತ್ತಿರುವುದರಿಂದ ಮೂರು ವಿದ್ಯುತ್ ಕಂಬಗಳೂ ಕೂಡಾ ಧರಾಶಾಯಿಯಾಗಿದ್ದು, ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲವಾಗಿದೆ. ಅವೈಜ್ಞಾನಿಕವಾಗಿ ಬಾಂದಾರ ನಿರ್ಮಾಣ ಮಾಡಿದ್ದರಿಂದ ರೈತರು ಇಂದು ಸಂಕಷ್ಟಕ್ಕೆ ಸಿಲುಕಿದ್ದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಪರಿಸ್ಥಿತಿ ಗಮನಕ್ಕೆ ಬಂದ ತಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.