ಭಟ್ಕಳ: ತಾಲೂಕಿನ ಕೋಣಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಳುರುಮನೆ ರಸ್ತೆಯ ಪಕ್ಕದಲ್ಲಿನ ಗುಡ್ಡದಿಂದ ಬೃಹತ್ ಗಾತ್ರದ ಬಂಡೆಯೊಂದು ಜಾರಿ ಬಿದ್ದು ಸುಮಾರು 500 ಮೀಟರ್ ತನಕ ಸಿಕ್ಕ ಸಿಕ್ಕ ಗಿಡ ಮರಗಳನ್ನು ನೆಲಕ್ಕೆ ಉರುಳಿಸುತ್ತಾ ಉರುಳಿಕೊಂಡು ಬಂದಿದ್ದು ಬೀಳೂರುಮನೆ ರಸ್ತೆಗೆ ಸ್ವಲ್ಪ ದೂರದಲ್ಲಿ ಸಮತಟ್ಟಾದ ಸ್ಥಳ ಇದ್ದಲ್ಲಿ ನಿಂತುಕೊಂಡಿದ್ದು ಬಹುದೊಡ್ಡ ಅಪಾಯ ತಪ್ಪಿದಂತಾಗಿದೆ.
ಗುಡ್ಡದಿಂದ ಉರುಳಿ ಬಿದ್ದ ಕಲ್ಲು ಬಂಡೆಯು ಬೃಹತ್ ಪ್ರಮಾಣದ್ದಾಗಿದ್ದು ಗುಡ್ಡದ ತುದಿಯಿಂದ ಉರುಳಿಕೊಂಡೇ ಬಂದಿದ್ದು ದೊಡ್ಡ ದೊಡ್ಡ ಮರಗಳು ಸಿಕ್ಕರೂ ಕೂಡಾ ನಿಲ್ಲದೇ ಅವುಗಳನ್ನೂ ಉರುಳಿಸಿಕೊಂಡು ಬಂದಿದ್ದು ಸ್ವಲ್ಪ ಮುಂದೆ ಬಂದು ರಸ್ತೆಯನ್ನು ದಾಟಿ ಉರುಳಿದ್ದರೆ ಕೆಳಗಡೆಯಲ್ಲಿರುವ ಮನೆಯವರಿಗೆ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಬಂಡೆಯು ಉರುಳಿ ಬರುತ್ತಿರುವ ಶಬ್ದ ಸುಮಾರು ಅರ್ಧ ಕಿ.ಮಿ. ವ್ಯಾಪ್ತಿಯಲ್ಲಿ ಕೇಳಿದ್ದು ಅಕ್ಕ ಪಕ್ಕದ ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುತ್ತಿರುವವರು, ಮನೆಯಲ್ಲಿರುವವರು ಎಲ್ಲರೂ ಬಂದು ನೋಡುತ್ತಿದ್ದಂತೆಯೇ ಬಂಡೆ ಉರುಳಿ ಬಂದು ಸಮತಟ್ಟಾದ ಸ್ಥಳದಲ್ಲಿ ನಿಂತು ಜನರ ಆತಂಕವನ್ನು ದೂರ ಮಾಡಿತ್ತು. ಸ್ವಲ್ಪ ಮುಂದೆ ಉರುಳಿದ್ದರೂ ಕೂಡಾ ರಸ್ತೆಯಲ್ಲಿ ಓಡಾಡುವ ವಾಹನ, ನಾಗರಿಕರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಅಲ್ಲದೇ ಅಲ್ಲೇ ಇರುವ ಮನೆಗಳವರಿಗೆ ಕೂಡಾ ತೊಂದರೆಯಾಗುವ ಸಾಧ್ಯತೆ ಇತ್ತು.
ಒಟ್ಟಾರೆ ಕೆಲ ಕಾಲ ಜನರಿಗೆ ಏನಾಗುತ್ತಿದೆ ಎನ್ನುವುದೇ ತಿಳಿಯದಾಗಿದ್ದು ಗೊಂದಮಯ ವಾತಾವರಣ ಸೃಷ್ಟಿಯಾಗಿತ್ತು ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನ ಗೋಪಾಲ್ ಅವರು ಸಿಬಂದಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಾರೆ. ಬಂಡೆಗಲ್ಲು ಸಮತಟ್ಟಾದ ಸ್ಥಳದಲ್ಲಿ ಭದ್ರವಾಗಿ ನಿಂತಿದ್ದರಿಂದ ಮುಂದೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಸಹ ಊರವರಿಗೆ ಮನದಟ್ಟು ಮಾಡಲಾಗಿದೆ ಎನ್ನಲಾಗಿದೆ.