Advertisement

Bhatkal: ಬೇರೆ ಬೇರೆ ಡಿಗ್ರಿ ಪಡೆದು ಅಲೋಪಥಿ ಔಷಧ ನೀಡುತ್ತಿದ್ದ ವೈದ್ಯರಿಗೆ ವಾರ್ನಿಂಗ್

09:28 PM Dec 27, 2023 | Team Udayavani |

ಭಟ್ಕಳ: ಬೇರೆ ಬೇರೆ ಡಿಗ್ರಿಗಳನ್ನು ಪಡೆದು ಅಲೋಪಥಿ ಔಷಧಗಳನ್ನು ನೀಡುತ್ತಿರುವ ವೈದ್ಯರ ವಿರುದ್ಧ ತಾಲೂಕಿನಎರಡು ಕಡೆಗಳಲ್ಲಿ ದಾಳಿ ನಡೆಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಮತ್ತು ಅವರ ತಂಡ ಎಚ್ಚರಿಕೆ ನೀಡಿ ಅವರು ರೋಗಿಗಳಿಗೆ ನೀಡಲು ಇಟ್ಟುಕೊಂಡಿದ್ದ ಅಲೋಪಥಿ ಔಷಧಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ವರದಿಯಾಗಿದೆ.

Advertisement

ನಗರದ ಹೂವಿನ ಮಾರುಕಟ್ಟೆ ಬಳಿ ಇರುವ ಗಣೇಶ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಆರೋಗ್ಯಾಧಿಕಾರಿ ಅಲ್ಲಿನ ವೈದ್ಯರು ಅಗತ್ಯ ವೈದ್ಯಕೀಯ ಪದವಿ ಪ್ರಮಾಣ ಹೊಂದಿರದೆ ಕಾನೂನು ಬಾಹಿರವಾಗಿ ಇಂಜೆಕ್ಷನ್, ಮಾತ್ರೆಗಳನ್ನು ರೋಗಿಗಳಿಗೆ ನೀಡಿ ಉಪಚರಿಸುವುದನ್ನು ಗಮನಿಸಿದರು. ಬಳಸಿದ ರೋಗ ನಿರೋಧಕ ಮಾತ್ರೆಗಳನ್ನು, ಗ್ಲೂಕೋಸ್ ಸಿರಿಂಜ್‌ಗಳನ್ನು ವೈದ್ಯಕೀಯ ನಿಯಮದಂತೆ ವಿಲೇವಾರಿ ಮಾಡದಿರುವುದವನ್ನು ಗಮನಿಸಿದ ಅವರು ತತ್ ಕ್ಷಣವೇ ಆಸ್ಪತ್ರೆಯನ್ನು ಬಂದ್ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಶಿರಾಲಿಯ ಚಿತ್ರಾಪುರ ರಸ್ತೆಯಲ್ಲಿರುವ ಸುಪ್ರದಾ ಕ್ಲಿನಿಕ್ ಮೇಲೆ ದಾಳಿ ನಡೆಸಿದ ವೈದ್ಯರು ಅಲ್ಲಿನ ವೈದ್ಯರು ಆಯುರ್ವೇದಿಕ್ ವಿಭಾಗದಲ್ಲಿ ವೈದ್ಯಕೀಯ ಪದವಿ ಪಡೆದು ಅಲೋಪತಿ ಔಷಧಿ ನೀಡುವುದನ್ನು ಗಮನಿಸಿ ಆರ್ಯುವೇದಿಕ್ ಔಷಧಿಯನ್ನು ಮಾತ್ರ ವಿತರಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಇನ್ನೂ ಹಲವಾರು ಕಡೆ ಅಗತ್ಯ ವೈದ್ಯಕೀಯ ಪ್ರಮಾಣ ಪತ್ರವಿಲ್ಲದೇ ಕ್ಲಿನಿಕ್‌ಗಳನ್ನು ಇಟ್ಟುಕೊಂಡು ರೋಗಿಗಳಿಗೆ ಅಲೋಪಥಿ ಔಷಧಗಳನ್ನು ನೀಡುತ್ತಿರುವ ಕುರಿತು ಗಮನಕ್ಕೆ ಬಂದಿದ್ದು, ಹಂತಹಂತವಾಗಿ ಎಲ್ಲವನ್ನೂ ಪತ್ತೆಹಚ್ಚಿ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next