ಭಟ್ಕಳ: ಮುರುಡೇಶ್ವರ ಸಮುದ್ರಕ್ಕೆ ಈಜಲು ತೆರಳಿ ತೆರೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನೋರ್ವನನ್ನು ಕರಾವಳಿ ಕಾವಲು ಪಡೆಯ ಕೆ.ಎನ್.ಡಿ. ಸಿಬ್ಬಂದಿಗಳು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿರುವ ಬಗ್ಗೆ ಅ. 13ರ ರವಿವಾರ ವರದಿಯಾಗಿದೆ.
ಸಂಗಡಿಗರೊಂದಿಗೆ ಬೆಂಗಳೂರಿನಿಂದ ಪ್ರವಾಸಕ್ಕೆ ಮುರ್ಡೇಶ್ವರಕ್ಕೆ ಬಂದಿದ್ದ ಪುನೀತ್ ಕೆ. (19) ಈಜಲು ಸಮುದ್ರಕ್ಕೆ ಇಳಿದಿದ್ದರು.
ಈಜಲು ಬಾರದ ಪುನೀತ್ ಗೆ ನೀರಿನ ಸೆಳೆತ ತಿಳಿಯದೇ ಮುಂದೆ ಮುಂದೆ ಹೋಗಿದ್ದರಿಂದ ಅಲೆಯ ಹೊಡೆತಕ್ಕೆ ಆಯತಪ್ಪಿ ಅಪಾಯಕ್ಕೆ ಸಿಲುಕಿದ್ದರು. ತಕ್ಷಣ ಇದನ್ನು ಕಂಡ ಸ್ಥಳದಲ್ಲಿದ್ದ ಕೆ.ಎನ್.ಡಿ. ಸಿಬ್ಬಂದಿ ಯೋಗೇಶ ಹರಿಕಾಂತ ಹಾಗೂ ಲಕ್ಷ್ಮಣ ಹರಿಕಾಂತ ಅವರು ಪಾತಿ ದೋಣಿಯನ್ನು ತೆಗೆದುಕೊಂಡು ಹೋಗಿ ಮುಳುಗುತ್ತಿದ್ದ ಪುನೀತ್ ಈತನನ್ನು ರಕ್ಷಣೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಲ್ಲಿ ಓರ್ವ ನೀರು ಪಾಲಾಗಿ ಮೃತಪಟ್ಟ ಘಟನೆ ಹಸಿರಾಗಿರುವುದರಿಂದ ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಕೆ.ಎನ್.ಡಿ. ಸಿಬ್ಬಂದಿಗಳು ಜಾಗೃತರಾಗಿರುವುದರಿಂದ ಪುನೀತ್ ರಕ್ಷಣೆ ಸಾಧ್ಯವಾಯಿತು.
ಮುರುಡೇಶ್ವರ ಸಮುದ್ರದಲ್ಲಿ ದೇವಾಸ್ಥಾನದ ಬಲಭಾಗಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಇಲ್ಲಿ ಪ್ರವಾಸಿಗರ ರಕ್ಷಣೆಗೆ ಅಗತ್ಯವಿರುವ ಸ್ಪೀಡ್ ಬೋಟ್, ಜೀವ ರಕ್ಷಕ ಸಾಮಗ್ರಿಗಳು ಇಲ್ಲದೇ ಇರುವುದರಿಂದ ತೊಂದರೆಯಾಗಿದ್ದು, ಪಾತಿ ದೋಣಿಯಲ್ಲಿ ಹೋಗಿ ರಕ್ಷಣೆ ಮಾಡಿದ್ದು, ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.