Advertisement

ಭಟ್ಕಳ: ಯುವತಿ ಜೊತೆ ಅಸಭ್ಯ ವರ್ತನೆ; ಪೊಲೀಸರೊಂದಿಗೆ ಯುವಕರ ವಾಗ್ವಾದ

02:37 PM Apr 21, 2023 | Team Udayavani |

ಭಟ್ಕಳ: ತಡರಾತ್ರಿ ರಂಜಾನ್‌ ಮಾರುಕಟ್ಟೆಯಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಲು ಹೋದವರೊಂದಿಗೆ ವಾಗ್ವಾದ ಮಾಡುತ್ತಿದ್ದವರನ್ನು ನಿಯಂತ್ರಿಸಲು ಹೋದ ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಪೊಲೀಸ್ ಜೀಪಿಗೆ ಹಾನಿ ಮಾಡಿರುವ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ತಡರಾತ್ರಿ ಯುವತಿಯೋರ್ವಳಿಗೆ ಕಿರುಕುಳ ನೀಡಿದ್ದಾರೆನ್ನಲಾದ ಹದ್ಲೂರಿನ ಚಂದ್ರು ಸೋಮಯ್ಯ ಗೊಂಡ ಎಂಬವನನ್ನು ಸುತ್ತುವರೆದು ಕೆಲ ಯುವಕರು ಗಲಾಟೆ ಮಾಡುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಪೊಲೀಸರು ನಿಯಂತ್ರಿಸಲು ಮುಂದಾದರು.

ಈ ಸಮಯದಲ್ಲಿ ಇನ್ನಷ್ಟು ಜನ ಸೇರುತ್ತಿದ್ದಂತೆಯೇ ಪೊಲೀಸರು ಜೀಪಿನಲ್ಲಿ ಆರೋಪಿಯನ್ನು ಹಾಗೂ ಆತನೊಂದಿಗೆ ವಾಗ್ವಾದ ನಡೆಸುತ್ತಿದ್ದ ಮೊಹಮ್ಮದ್ ಮೀರಾನ್ ಎಂಬವನನ್ನು ಕರೆದೊಯ್ಯಲು ಮುಂದಾದಾಗ ಅಲ್ಲಿ ಸೇರಿದ್ದ ಜನರು ಜೀಪನ್ನು ಅಡ್ಡಗಟ್ಟಿದ್ದಲ್ಲದೇ ಕಲ್ಲು ತೂರಾಟ ನಡೆಸಿದ್ದರಿಂದ ಜೀಪಿಗೆ ಹಾನಿಯಾಗಿದೆ ಎನ್ನಲಾಗಿದೆ.

ತಕ್ಷಣ ಜಾಗೃತರಾದ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆ ತಂದು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಐವರು ಹಾಗೂ ಇನ್ನಿತರರ ಮೇಲೆ ಪ್ರಕರಣ ದಾಖಲಿಸಿಕೊಂಡು ರಾತ್ರಿಯೇ ಮೂವರನ್ನು ವಶಕ್ಕೆ ಪಡೆದರು. ನಂತರ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಉಳಿದಂತೆ ಮತ್ತೇ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪರವಾನಿಗೆ ಇಲ್ಲ: ಈ ಬಾರಿ ಚುನಾವಣಾ ನೀತಿ ಸಂಹಿತೆ ಇರುವುದರಿಂದ ರಂಜಾನ್ ಮಾರುಕಟ್ಟೆಗೆ ಅವಕಾಶ ಕೊಡಬಾರದು ಎಂದು‌ ಈ ಮೊದಲೇ ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ ಆಗ್ರಹಿಸಿದ್ದು, ಪುರಸಭೆಯಿಂದ ಅಧಿಕೃತ ಪರವಾನಿಗೆ ಇಲ್ಲದಿದ್ದರೂ ಸಹ ಅನಧಿಕೃತವಾಗಿ ಕೆಲವರು ಹಣ ಮಾಡುವ ಉದ್ದೇಶದಿಂದ ಮಾರುಕಟ್ಟೆ ಹಾಕಲು ಒಳ ಒಪ್ಪಂದ ಮಾಡಿಕೊಂಡು ಅವಕಾಶ ಮಾಡಿಕೊಟ್ಟಿದ್ದಾರೆ.

Advertisement

ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಸಾವಿರಾರು ಜನ ಸೇರುತ್ತಿದ್ದರೂ ಪೊಲೀಸ್ ಇಲಾಖೆಯಾಗಲೀ, ಚುನಾವಣಾ ಕರ್ತವ್ಯದಲ್ಲಿರುವವರಾಗಲೀ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಇಂದಿನ ಘಟನೆಗೆ ಕಾರಣವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮಾರುಕಟ್ಟೆಯನ್ನು ಹಾಕಲು ಒಳ ಒಪ್ಪಂದ ಮಾಡಿಕೊಂಡು ಹಣ ಮಾಡಿದವರ ವಿರುದ್ಧ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next