ಭಟ್ಕಳ: ಮಹಿಳೆಯೋರ್ವರ ಮೇಲೆ ದ್ವೇಷದಿಂದ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಮೈಮೇಲೆ ಕೈಹಾಕಿ ಅಪಮಾನಗೊಳಿಸಿ, ಬಟ್ಟೆಯನ್ನು ಹರಿದು ಹಾಕಿ ಬೆದರಿಕೆ ಹಾಕಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ ಇಲ್ಲಿನ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿತನ ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಿದ್ದಾರೆ.
ಅನಿವಾಸಿ ಭಾರತೀಯ ಬಂದರ ರಸ್ತೆಯ ಇರ್ಷಾದ್ ಅಹಮ್ಮದ್ ಖಾಜಿಯಾ ಎನ್ನುವವನು ದಂಡ ಹಾಗೂ ಶಿಕ್ಷೆಗೆ ಗುರಿಯಾದವನಾಗಿದ್ದಾನೆ.
ಇರ್ಷಾದ್ ಅಮೆರಿಕಾದ ಪ್ರಜೆಯಾಗಿದ್ದು ಕಳೆದ ಹಲವಾರು ವರ್ಷಗಳಿಂದ ತಪ್ಪಿಸಿಕೊಂಡಿದ್ದನು. 2013ರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯ ವೇಳೆ ಹಾಜರಾಗದೇ ಇರುವ ಕಾರಣಕ್ಕೆ ವಾರಂಟ್ ಹೊರಡಿಸಲಾಗಿತ್ತು. ಆರೋಪಿಯು ಭಾರತಕ್ಕೆ ಬಂದು ವಾಪಾಸು ಹೋಗುವ ಸುಳಿವು ದೊರೆತ ಕಾರಣ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗೆ ಕಲಂ 341ರ ಅಡಿಯಲ್ಲಿ 3 ತಿಂಗಳು ಸಜೆ, ರೂ.250 ದಂಡ, ಕಲಂ 323ರ ಅಡಿಯಲ್ಲಿ 1 ವರ್ಷ ಸಜೆ, ರೂ.1000 ದಂಡ, ಕಲಂ 354ರ ಅಡಿಯಲ್ಲಿ 2 ವರ್ಷ ಸಜೆ, ರೂ.7000 ದಂಡ, ಕಲಂ 504ರ ಅಡಿಯಲ್ಲಿ 7 ತಿಂಗಳು ಸಜೆ, ರೂ.250 ದಂಡ, ಕಲಂ 506ರ ಅಡಿಯಲ್ಲಿ 7 ತಿಂಗಳು ಸಜೆ, ರೂ.500 ದಂಡ ವಿಧಿಸಲಾಗಿದೆ. 2 ವರ್ಷ ಸಜೆ, ರೂ.9150 ದಂಡ ಹಾಗೂ ಪಿರ್ಯಾದಿಗೆ ರೂ.5000 ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸಹಕಾರಿ ಅಭಿಯೋಜಕ ವಿವೇಕ ಆರ್. ನಾಯ್ಕ ವಾದಿಸಿದ್ದರು.