ಭಟ್ಕಳ: ಜಾಲಿ ಪಟ್ಟಣ ಪಂಚಾಯತ್‍ನಲ್ಲಿ ಈ ಹಿಂದೆ ನಕಲಿ ಅನಾಪೇಕ್ಷಣಾ ಪತ್ರ ನೀಡಿಕೆಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಜೀವಂತ ವ್ಯಕ್ತಿಯೇ ಮರಣ ಹೊಂದಿದ್ದಾನೆಂದು ನಕಲಿ ಮರಣ ದಾಖಲೆ ಸೃಷ್ಟಿಸಿದ್ದು ಆತನ ಹೆಸರಿನಲ್ಲಿದ್ದ 5 ಕೋಟಿ ರೂಪಾಯಿ ಜೀವ ವಿಮೆಯನ್ನು ಲಪಟಾಯಿಸಲು ಹವಣಿಸಿದಾಗ ಬೆಳಕಿಗೆ ಬಂದಿದೆ.
ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ಜನನ ಮರಣ ನೋಂದಣಿ ವಿಭಾಗದಲ್ಲಿ 2021ರ ಅಗಸ್ಟ್ 4ನೇ ತಾರೀಖಿನಂದು ಹಾಸನದ ಎಚ್.ಡಿ. ದೇವೇಗೌಡ ನಗರ ಎನ್ನುವ ವಿಳಾಸವುಳ್ಳ ಮಹಿಳೆ ಮೀನಾಕ್ಷಿ ಡಿ.ಎಚ್. ಎನ್ನುವವರು ಬಂದು ತನ್ನ ಮಗ ತೀರಿಕೊಂಡಿದ್ದು ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಮನವಿ ಮಾಡಿದ್ದರು. ಆ ನಂತರ ಜನನ ಮರಣ ವಿಭಾಗದ ಸಿಬ್ಬಂದಿಗಳು ಕ್ರಮ ತೆಗೆದುಕೊಂಡಿದ್ದು ಸೆಪ್ಟಂಬರ್ 2021ರ 13ರಂದು ಹರ್ಷವರ್ಧನ್ ಎನ್ನುವ ವ್ಯಕ್ತಿಯ ಮರಣ ಪ್ರಮಾಣ ಪತ್ರವನ್ನು ನೀಡಲಾಗಿತ್ತು.
ಜಾಲಿಯ ಜಂಗನಗದ್ದೆಯಲ್ಲಿನ ವಿಳಾಸ ನೀಡಿದ್ದ ಮಹಿಳೆ ಇಲ್ಲಿನ ನಕಲಿ ಆಧಾರ್ ಕಾರ್ಡ ಕೂಡಾ ಹಾಜರುಪಡಿಸಿರುವುದು ಇದು ಹೇಗೆ ಸಾಧ್ಯವಾಯಿತು ಎನ್ನುವುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಹರ್ಷವರ್ಧನ್ ಎನ್ನುವವರು ಹಾಸನದವರಾಗಿದ್ದು ಉತ್ತಮ ವ್ಯವಹಾರ ಮಾಡಿಕೊಂಡಿರುವ ವ್ಯಕ್ತಿ ಎನ್ನಲಾಗಿದೆ. ಆತನ ಹೆಸರಿನಲ್ಲಿ 5 ಕೋಟಿ ವಿಮಾ ಮಾಡಿಸಲಾಗಿದ್ದು ವಿಮಾ ಹಣವನ್ನ ಲಪಟಾಯಿಸಲು ಜಾಲಿ ಪಟ್ಟಣ ಪಂಚಾಯತ್ ಸಿಬ್ಬಂದಿಯೋರ್ವರನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಲಾಗಿದೆ ಎನ್ನಲಾಗಿದೆ.
ಆತನ ತಾಯಿ ಎಂದು ಹೇಳಿಕೊಂಡು ಜಾಲಿಯ ಜಂಗನಗದ್ದೆಯ ವಿಳಾಸ ನೀಡಿದ ಮಹಿಳೆ ಯಾರು ಎನ್ನುವುದು ತಿಳಿದು ಬರಬೇಕಿದೆ. ಆಕೆಯು ಜಂಗನಗದ್ದೆಯ ವಿಳಾಸದ ದಾಖಲೆಗಳನ್ನು ನೀಡಿದ ನಂತರ ಜಾಲಿ ಪಟ್ಟಣ ಪಂಚಾಯತ್ ಆರೋಗ್ಯ ವಿಭಾಗದ ವತಿಯಿಂದ ಸ್ಥಳ ಪಂಚನಾಮೆ ಮಾಡಿ ಖಚಿತಪಡಿಸಿಕೊಂಡು ಮರಣ ದಾಖಲೆಯನ್ನು ನೀಡಲಾಗಿದ್ದು ಎಲ್ಲವೂ ನಕಲಿ ಎನ್ನುವುದು ತಿಳಿದು ಬಂದಿದೆ.
ವ್ಯಕ್ತಿಯು ಓರ್ವ ಉತ್ತಮ ವ್ಯವಹಾರಸ್ಥನಾಗಿದ್ದು ಆತನ ಹೆಸರಿನಲ್ಲಿರುವ ವಿಮಾ ಹಣವನ್ನು ಹೊಡೆಯುವುದಕ್ಕೆ ಇಂತಹ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮರಣ ಪ್ರಮಾಣ ಪತ್ರವನ್ನು ಪಡೆಯಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು ಈ ಕೃತ್ಯಕ್ಕೆ ಆರೋಗ್ಯ ವಿಭಾಗದ ಸಿಬ್ಬಂದಿಗಳ ಕೈವಾಡವಿರುವುದು ಕೂಡಾ ಬೆಳಕಿಗೆ ಬಂದಿದ್ದು ಇನ್ನಷ್ಟೇ ಸಂಪೂರ್ಣ ವಿಷಯ ತಿಳಿದು ಬರಬೇಕಿದೆ.
ಈ ಬಗ್ಗೆ ಜಾಲಿ ಪಟ್ಟಣ ಪಂಚಾಯತ್ ಹಿರಿಯ ಆರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ದೂರನ್ನು ಆಧರಿಸಿ ನಗರ ಠಾಣೆಯ ಇನ್ಸಪೆಕ್ಟರ್ ದಿವಾಕರ ಪಿ.ಎಂ. ಅವರು ಸಿಬ್ಬಂದಿಗಳೊಂದಿಗೆ ಜಾಲಿ ಪಟ್ಟಣ ಪಂಚಾಯತಕ್ಕೆ ತೆರಳಿ ಅಲ್ಲಿನ ಕಂಪ್ಯೂಟರ್, ಕಡತಗಳನ್ನು ವಶಕ್ಕೆ ಪಡೆದು ತನಿಖೆ ಆಂಭಿಸಿದ್ದಾರೆ.