ಗಂಗೊಳ್ಳಿ: ಇಲ್ಲಿನ ಬಂದರಿನ ಮ್ಯಾಂಗನೀಸ್ ವಾರ್ಫ್ ಗೆ ಭಟ್ಕಳದ ಎರಡು ಬೋಟುಗಳು ಆಗಮಿಸಿವೆ. ಸ್ಥಳೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮುಂಜಾನೆ 3 ಗಂಟೆ ವೇಳೆಗೆ ಭಟ್ಕಳದ ಎರಡು ಬೋಟುಗಳು ಮೀನುಗಾರಿಕೆಗೆ ಬಂದಿದ್ದವು. ತತ್‌ಕ್ಷಣ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದಂತೆ ಅವರನ್ನು ಹಿಡಿಯಲಾಯಿತು. ಆದರೆ ಅನುಮತಿ ರಹಿತವಾಗಿ ಮೀನುಗಾರಿಕೆಗೆ ಭಟ್ಕಳದಿಂದ ಗಂಗೊಳ್ಳಿ ಸಮುದ್ರದ ಕಡೆಗೆ ಆಗಮಿಸಿದ್ದಕ್ಕೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕರು, ಎಸಿ, ಡಿಸಿಗೆ ದೂರು ನೀಡಿದ್ದಾರೆ. ಕರಾವಳಿ ಕಾವಲು ಪಡೆಯವರು ಈ ಕುರಿತಂತೆ ವಿಚಾರಣೆ ನಡೆಸುವಂತೆ ಗಂಗೊಳ್ಳಿ ಪೊಲೀಸ್ ಠಾಣೆಯವರಿಗೆ ಮಾಹಿತಿ ನೀಡಿದ್ದಾರೆ. ಬೋಟಿನ ಮಾಲಕರನ್ನು ಸಂಪರ್ಕಿಸಿದಾಗ ಬೋಟಿನಲ್ಲಿ ತಲಾ ಒಬ್ಬರಂತೆ ಮಾತ್ರ ಇದ್ದರು ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಜನರಿದ್ದರೆ ಎಂಬ ಕುರಿತು ಪೊಲೀಸರಿಗೂ ಖಚಿತ ಮಾಹಿತಿಗಳಿಲ್ಲ. ಸಮುದ್ರ ಮಾರ್ಗದಲ್ಲಿ ಬಂದ ಕಾರಣ ಮೀನುಗಾರಿಕಾ ಇಲಾಖೆ ಅವರನ್ನು ಮರಳಿ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಗಂಗೊಳ್ಳಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆವರೆಗೂ ಪ್ರಕರಣ ಇತ್ಯರ್ಥ ಆಗಿಲ್ಲ. ಹಿಡಿದಿಟ್ಟುಕೊಂಡ ಬೋಟ್‌ಗಳು ಬಾಕಿಯಾಗಿದ್ದು ಅದರಲ್ಲಿ ಬಂದವರು ಅತಂತ್ರರಾಗಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇತರ ಜಿಲ್ಲೆಗಳಿಗೆ ಬೋಟುಗಳು ಪ್ರವೇಶಿಸುವಂತಿಲ್ಲ. ಆದರೆ ಕೆಲವು ದಿನಗಳಿಂದ ಭಟ್ಕಳದ ಬೋಟುಗಳು ಆಗಮಿಸುತ್ತಿವೆ. ಇದಕ್ಕಾಗಿ ಸ್ಥಳೀಯರು ಆಕ್ಷೇಪಿಸುತ್ತಿದ್ದಾರೆ.