ಬೆಳಗಾವಿ: ಬೆಳಗಾವಿ ಗಡಿ ಭಾಗದ ಮರಾಠಿ ಭಾಷಿಕರ ಮೇಲೆ ಅನ್ಯಾಯವಾಗುತ್ತಿದೆ ಎಂದು ಯಾವುದೋ ಸರ್ಕಾರ ಬರುತ್ತದೆ ಮಹಾರಾಷ್ಟ್ರಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎನ್ನುವುದು ಹುಚ್ಚು ಕಲ್ಪನೆ. ಈ ಪ್ರದೇಶವನನ್ನು ಕತ್ತರಿಸಿ ಇಬ್ಭಾಗ ಮಾಡಲು ಇನ್ನೂ ಯಾರೂ ಹುಟ್ಟಿಲ್ಲ ಎಂದು ಔರಂಗಾಬಾದ್ ಜಿಲ್ಲೆಯ ಆದರ್ಶ ಹಳ್ಳಿ ಎಂದೇ ಖ್ಯಾತವಾದ ಪಟೋದಾ ಗ್ರಾಪಂ ಅಧ್ಯಕ್ಷ ಭಾಸ್ಕರರಾವ್ ಪೇರೆ ಪಾಟೀಲ ಹೇಳಿದರು.
ತಾಲೂಕಿನ ನಿಲಜಿ ಗ್ರಾಮದಲ್ಲಿ ಶನಿವಾರ ನಡೆದ ನಿಲಜಿ ಗ್ರಾಮ ವಿಕಾಸ ಸಮಿತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಈ ಪ್ರದೇಶವನ್ನು ಇಬ್ಭಾಗ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸುಳ್ಳು ಮಾತನಾಡುವವರ ಬೆಂಬಲಕ್ಕೆ ನಿಲ್ಲುವುದಿಲ್ಲ ಎಂದರು.
ಮಹಾರಾಷ್ಟ್ರದಿಂದ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂಬುದು ಸುಳ್ಳು. ಇದೆಲ್ಲವನ್ನೂ ತಲೆಯಿಂದ ತೆಗೆದು ಹಾಕಿ. ಈಗ ನೀವು ಎಲ್ಲಿದ್ದೀರೋ ಅಲ್ಲಿಯೇ ಸುಖವಾಗಿ ಇರಬೇಕು. ನಾವಿರುವ ಸ್ಥಳ ಅಭಿವೃದ್ಧಿ ಆಗಬೇಕು. ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿಲ್ಲ. ನಿಮಗೆ ಸಿಟ್ಟಿದ್ದರೆ ಪಕ್ಕದ ಪ್ರದೇಶಕ್ಕೆ ಬನ್ನಿ ಎಂದರು.
ಇದನ್ನೂ ಓದಿ : ಏಮ್ಸ್ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕನಿಗೆ ದೇಶದ ಮೊಟ್ಟ ಮೊದಲ ಲಸಿಕೆ!
‘ಪಂಢರಪುರದಲ್ಲಿ ನೆಲೆಸಿರುವ ವಿಠ್ಠಲನನ್ನು ಕಾನಡಾ ವಿಠ್ಠಲ ಎನ್ನುತ್ತೇವೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿಠ್ಠಲ ಒಂದೇ ಎನ್ನುವುದು ಅರ್ಥ ಮಾಡಿಕೊಳ್ಳಬೇಕು. ಹೀಗಿರುವಾಗ ನಾವು ಏಕೆ ಪರಸ್ಪರ ಜಗಳ ಮಾಡಬೇಕು. ಕನ್ನಡಿಗರು-ಮರಾಠಿಗರು ಮನುಷ್ಯರೇ. ಎಲ್ಲರೂ ಪ್ರೀತಿಯಿಂದ ಇರಬೇಕು. ಮರಾಠಿ ಭಾಷಿಕರಿಗೆ ಅನ್ಯಾಯ ಆಗುತ್ತಿದೆ ಎಂದಾದರೆ ಕರ್ನಾಟಕ ಸರ್ಕಾರ ಈ ಬಗ್ಗೆ ಕಾಳಜಿ ವಹಿಸಬೇಕು. ಶಾಲೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳುವುದಾಗಿ’ ಭಾಸ್ಕರರಾವ್ ಪೇರೆ ಪಾಟೀಲ ಹೇಳಿದರು.