Advertisement

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಎರಡು ವಾರದೊಳಗೆ ಉತ್ತರಿಸಿ: ರಾಜ್ಯಕ್ಕೆ ಸುಪ್ರೀಂ ನೋಟಿಸ್‌

10:37 PM Oct 12, 2020 | mahesh |

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಿರಂಜನ ಭಟ್‌ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾದ ನ್ಯಾ| ಎಸ್‌.ಎಸ್‌. ಬೋಪಣ್ಣ, ನ್ಯಾ| ವಿ. ರಾಮಸುಬ್ರಹ್ಮಣ್ಯಂ ಅವರನ್ನೊಳಗೊಂಡ ನ್ಯಾಯಪೀಠವು ಜಾಮೀನು ಅರ್ಜಿಯ ಕುರಿತು ಎರಡು ವಾರಗಳ ಒಳಗಾಗಿ ಉತ್ತರ ನೀಡುವಂತೆ ರಾಜ್ಯ ಸರಕಾರಕ್ಕೆ ಅ. 8ರಂದು ನೋಟಿಸ್‌ ಜಾರಿ ಮಾಡಿದೆ. 2016ರಲ್ಲಿ ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಹತ್ಯೆ ಮಾಡಿ ಹೋಮಕುಂಡದಲ್ಲಿ ಶವವನ್ನು ಸುಟ್ಟು ಹಾಕಲಾಗಿತ್ತು.

Advertisement

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಮಗ ನವನೀತ್‌ ಶೆಟ್ಟಿ ಹಾಗೂ ಸಾಕ್ಷಿ ನಾಶದ ಆರೋಪ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ನಿರಂಜನ್‌ ಭಟ್‌ ಅವರ ತಂದೆ ಶ್ರೀನಿವಾಸ ಭಟ್‌ ಹಾಗೂ ಚಾಲಕ ರಾಘವೇಂದ್ರ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ ಭಟ್‌ ಜಾಮೀನು ಸಿಗದೆ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ನಿರಂಜನ್‌ ಭಟ್‌ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಜು. 27ಕ್ಕೆ ವಜಾಗೊಳಿಸಿತ್ತು. ಅಲ್ಲದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿಲ್ಲ. ಮಾತ್ರವಲ್ಲ ಹಲವು ಸಾಕ್ಷಿಗಳನ್ನು ಇನ್ನಷ್ಟೇ ವಿಚಾರಣೆಗೆ ಒಳಪಡಿಸಬೇಕಾಗಿದೆ. ಈ ಪ್ರಕ್ರಿಯೆಯನ್ನು ಮುಗಿಸಲು ಇನ್ನೂ ಆರು ತಿಂಗಳ ಕಾಲಾವಕಾಶ ಬೇಕಾಗಿದೆ. ಅನಂತರದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಹೈಕೋರ್ಟ್‌ ಸೂಚನೆ ನೀಡಿತ್ತು.

ಹೈಕೋರ್ಟ್‌ನ ಈ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ನಿರಂಜನ್‌ ಭಟ್‌ ಸುಪ್ರಿಂಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತು ಸುಪ್ರೀಂ ಕೋರ್ಟ್‌ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next