ಹೊಸದಿಲ್ಲಿ : ನಗಣ್ಯ ವೆಚ್ಚದಲ್ಲಿ ನಿಕೃಷ್ಟ ನಗದು ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯವ ಯತ್ನದ ಭಾಗವಾಗಿ ವಿಶ್ವದ ಮೊತ್ತ ಮೊದಲ ಅಂತರ್ ಬಳಕೆಯ ಪಾವತಿ ಸ್ವೀಕೃತಿಯನ್ನು ಅನುಕೂಲಿಸುವ ಭಾರತ್ ಕ್ಯೂ ಆರ್ ಕೋಡ್ ಅನ್ನು ನಿನ್ನೆ ಸೋಮವಾರ ಬಳಕೆಗೆ ಬಿಡುಗಡೆಗೊಳಿಸಲಾಗಿದೆ.
ಕಳೆದ ಎರಡು ತಿಂಗಳಿಂದ ಕೇಂದ್ರ ಸರಕಾರ ಭೀಮ್ ಆ್ಯಪ್ಲಿಕೇಶನ್ ಹಾಗೂ ಪಿಓಎಸ್ ಮಶೀನ್ ಸೇರಿದಂತೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೆ ತರುವ ಪ್ರಯತ್ನ ನಡೆಸಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಭಾರತ್ ಕ್ಯೂ ಆರ್ ಕೋಡ್ ಬಿಡುಗಡೆಗೊಳಿಸಲಾಗಿದೆ.
ಭಾರತ್ ಕ್ಯೂ ಆರ್ ಕೋಡ್ ಅನ್ನು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ), ಮಾಸ್ಟರ್ ಕಾರ್ಡ್ ಮತ್ತು ವಿಸಾ ಜತೆಗೂಡಿ ಅಭಿವೃದ್ಧಿಪಡಿಸಿವೆ.
ಇನ್ನು ಮುಂದೆ ವರ್ತಕರು ತಮ್ಮ ಅಂಗಡಿಯಲ್ಲಿ ಹಲವು ಬಗೆಯ ಕ್ಯೂ ಆರ್ ಕೋಡ್ ತೂಗು ಹಾಕದೇ ಕೇವಲ ಭಾರತ್ ಕ್ಯೂ ಆರ್ ಕೋಡ್ ಅನ್ನು ತೂಗು ಹಾಕಿದರೆ ಸಾಕು; ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಭಾರತ್ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಪಾವತಿಯನ್ನು ಮಾಡುವುದು ಸುಲಭವೂ ಸರಳವೂ ಆಗಿರುತ್ತದೆ.
ಭಾರತ್ ಕ್ಯೂ ಆರ್ ಕೋಡ್ ರೂಪಿಸುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಸೆಪ್ಟಂಬರ್‌ನಲ್ಲೇ ಮಾರ್ಗಸೂಚಿ ನೀಡಿತ್ತು. ಆ ಪ್ರಕಾರ ಬಳಕೆದಾರರು ಈಗಿನ್ನು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳನ್ನು ಬಳಸದೇನೇ ಭಾರತ್ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಪಾವತಿಯನ್ನು ಮಾಡಬಹುದಾಗಿದೆ ಎಂದು ಆರ್‌ಬಿಐ ಈಗ ಹೇಳಿದೆ.