Advertisement

ವಲಸೆಗೆ ಮೂಲ ಬಿಜೆಪಿಗರ ಅಪಸ್ವರ ; ಪಕ್ಷನಿಷ್ಠರಿಗೆ ಅವಕಾಶ ಕಡಿಮೆಯಾಗುವ ಆತಂಕ

12:44 AM Oct 04, 2021 | Team Udayavani |

ಬೆಂಗಳೂರು: ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ 20 ಮಂದಿ ಹಾಲಿ, ಮಾಜಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ, ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಜತೆ ಮಾತುಕತೆ ನಡೆದಿದೆ ಎಂಬ ಮಾಹಿತಿ ಬಿಜೆಪಿಯಲ್ಲಿ ತೀವ್ರ ತಳಮಳಕ್ಕೆ ಕಾರಣವಾಗಿದೆ. ಅನ್ಯ ಪಕ್ಷಗಳಿಂದ ನಾಯಕರನ್ನು ಆಮದು ಮಾಡಿಕೊಳ್ಳುವ ವಿಚಾರಕ್ಕೆ ಪಕ್ಷದಲ್ಲಿ ಭಾರೀ ಆಕ್ಷೇಪ ವ್ಯಕ್ತ ವಾಗಿದೆ ಎನ್ನಲಾಗುತ್ತಿದೆ.

Advertisement

ಬಿಜೆಪಿ ಸರಕಾರ ರಚನೆಗೆ ಕಾರಣರಾದ ಕಾಂಗ್ರೆಸ್‌, ಜೆಡಿಎಸ್‌ನಿಂದ ವಲಸೆ ಬಂದ ಶಾಸಕರಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿದೆ ಎಂಬ ಅಸಮಾಧಾನ ಈಗಾಗಲೇ ಪಕ್ಷದಲ್ಲಿದೆ. ಸರಕಾರ ದಲ್ಲಿ ಅರ್ಧಕ್ಕೂ ಹೆಚ್ಚು ಸಚಿವರು ವಲಸಿಗರೇ ಆಗಿದ್ದು, ಬಿಜೆಪಿಯ ಮೂಲ ಕಾರ್ಯ ಕರ್ತರ ಅಹವಾಲುಗಳಿಗೆ ಅವರಿಂದ ಮಾನ್ಯತೆ ದೊರೆ ಯುತ್ತಿಲ್ಲ ಎಂಬ ಅತೃಪ್ತಿ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ನಾಯಕರು ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದರೆ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿ ಸಲು ಅವಕಾಶ ನೀಡಬೇಕಾಗುತ್ತದೆ. ಆಗ ಮೂಲ ಬಿಜೆಪಿ ಮುಖಂಡರಿಗೆ ಅವಕಾಶ ಸಿಗದು ಎಂದು ಕಾರ್ಯಕರ್ತರು ಪಕ್ಷದ ನಾಯಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಹಳೆ ಮೈಸೂರು ಭಾಗದಲ್ಲಿ ಪಕ್ಷದ ಚಟುವಟಿಕೆಗಳು ವಿಸ್ತಾರಗೊಂಡಿದ್ದು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿಯೂ ಪಕ್ಷ ಗಟ್ಟಿಗೊಳ್ಳುತ್ತಿದೆ. ಚುನಾವಣೆಯ ಲೆಕ್ಕಾಚಾರದಲ್ಲಿ ಅನ್ಯ ಪಕ್ಷಗಳಿಂದ ನಾಯಕರನ್ನು ಆಮದು ಮಾಡಿಕೊಂಡರೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ:ಮೇಕೆದಾಟು ನಿಲುವಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

Advertisement

ವರಿಷ್ಠರ ಆಲೋಚನೆ
ಅನ್ಯ ಪಕ್ಷಗಳಿಂದ ನಾಯಕರನ್ನು ಕರೆತರುವ ಕುರಿತು ಪಕ್ಷದ ವರಿಷ್ಠರು ಸ್ಪಷ್ಟ ಸೂಚನೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವಲಸಿಗರ ಸಂಖ್ಯೆ ಹೆಚ್ಚಾದರೆ ಪಕ್ಷದ ಮೂಲ ಸಿದ್ಧಾಂತವೇ ಮರೆಯಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ರಾಜ್ಯ ಕೆಲವು ನಾಯಕರು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಇದೇ ಕಾರಣಕ್ಕೆ ಈ ಕುರಿತು ವರಿಷ್ಠರು ಇನ್ನೂ ಸ್ಪಷ್ಟ ಸೂಚನೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ನಾಯಕರ ಬೇಸರ
ಪಕ್ಷದ ಬೇರುಗಳನ್ನು ವಿಸ್ತರಿಸಲು ಕೆಲವು ಸಮುದಾಯಗಳ ನಾಯಕ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಲಿತ ಬಲಗೈ ಸಮುದಾಯ, ಒಕ್ಕಲಿಗ ಸಮುದಾಯದ ನಾಯಕರನ್ನು ಸೇರಿಸಿಕೊಳ್ಳುವುದರಿಂದ ಪಕ್ಷದಲ್ಲಿ ಈಗಾಗಲೇ ಇರುವ ಈ ಸಮುದಾಯಗಳ ನಾಯಕರು ತಮ್ಮ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂಬ ಆತಂಕದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಲಾಗದೆ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next