ಪಣಜಿ: ದೇಶದಲ್ಲಿ ಕಾರ್ಮಿಕ ವಿರೋಧಿ ಧೊರಣೆ ಹಾಗೂ ಕೃಷಿಕರ ವಿರುದ್ಧ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಸಪ್ಟೆಂಬರ್ 27 ರಂದು ವಿವಿಧ ಕಾರ್ಮಿಕ ಸಂಘಟನೆ ದೇಶವ್ಯಾಪಿ ‘ಭಾರತ್ ಬಂದ್’ ಗೆ ಕರೆ ನೀಡಿದೆ.
ಭಾರತ್ ಬಂದ್ ಅಡಿಯಲ್ಲಿ ಗೋವಾದ ಐಟೆಕ್ ಸಮೀತಿಯ ವತಿಯಿಂದ ವಿವಿಧ ಕಂಪನಿಗಳ ಪ್ರವೇಶದ್ವಾರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಚಳುವಳಿಯ ಒಂದು ಭಾಗವಾಗಿ ಸಪ್ಟೆಂಬರ್ 30 ರಂದು ಪಣಜಿಯ ಆಜಾದ ಮೈದಾನದಲ್ಲಿ ಕಾರ್ಮಿಕ ಮಹಾಮೇಳ ಹಾಗೂ ಧರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗೋವಾ ಐಟೆಕ್ ಸಂಘಟನೆಯ ಪ್ರಮುಖ ಕ್ರಿಸ್ತೊಫರ್ ಫೊನ್ಸೆಕಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿಗೆ ಆನ್ ಲೈನ್ ಮೂಲಕ ಸಾರ್ವಜನಿಕರೇ ಸಾಧಕರನ್ನು ಶಿಫಾರಸ್ಸು ಮಾಡಬಹುದು
ಪಣಜಿಯ ಐಟೆಕ್ ಕಾರ್ಯಾಲಯದಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು- ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಹೆಚ್ಚಿನ ತೊಂದರೆಯುಂಟಾಗುತ್ತಿದೆ, ಈ ಧೋರಣೆಯಿಂದಾಗಿ ಬೆರಳೆಣಿಕೆಯಷ್ಟು ಜನರಿಗೆ ಲಾಭವುಂಟಾಗುತ್ತಿದೆ. ದೇಶದಲ್ಲಿ ಕೃಷಿಕರ ಮತ್ತು ಕಾರ್ಮಿಕರ ಮೇಲಿನ ಅತ್ಯಾಚಾರ ಹಾಗೂ ಹಿಂಸೆಯನ್ನು ನಿಷೇಧಿಸಿ ಭಾರತ್ ಬಂದ್‍ಗೆ ಕರೆ ನೀಡಲಾಗಿದೆ ಎಂದು ಕ್ರಿಸ್ತೊಫರ್ ಫೊನ್ಸೆಕಾ ನುಡಿದರು.
ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕಾರ್ಮಿಕರಿಗೆ ಹಲವು ಆಶ್ವಾಸನೆ ನೀಡಿತ್ತು, ಈ ಪೈಕಿ ಎಷ್ಟು ಆಶ್ವಾಸನೆ ಪೂರ್ಣಗೊಳಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕ್ರಿಸ್ತೊಫರ್ ಫೊನ್ಸೆಕಾ ಆಗ್ರಹಿಸಿದರು.