Advertisement
ಈ ಮುಷ್ಕರಕ್ಕೆ ಬ್ಯಾಂಕ್ ನೌಕರರ ಸಂಘಗಳು ಬೆಂಬಲ ಘೋಷಿಸಿದ್ದ ಕಾರಣ, ದೇಶಾದ್ಯಂತ ಬ್ಯಾಂಕುಗಳು ತೆರೆದಿದ್ದರೂ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು. ದೇಶದ ವಿವಿಧ ಪ್ರದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದರೂ, ಸರ್ಕಾರಿ ಕಚೇರಿಗಳಲ್ಲಿನ ಕೆಲಸ ಕಾರ್ಯಗಳು ಎಂದಿನಂತೆ ನಡೆದಿವೆ. ಒಟ್ಟಾರೆ ಮುಷ್ಕರದಲ್ಲಿ 25 ಕೋಟಿ ಮಂದಿ ಭಾಗಿಯಾಗಿದ್ದಾರೆ ಎಂದು ಕಾರ್ಮಿಕ ಒಕ್ಕೂಟಗಳು ಹೇಳಿಕೊಂಡಿವೆ.
ಪಶ್ಚಿಮ ಬಂಗಾಳದಲ್ಲಿ ಬಂದ್ ಬಿಸಿ ಜನರಿಗೆ ತುಸು ಹೆಚ್ಚಾಗಿಯೇ ತಟ್ಟಿದೆ. ಇಲ್ಲಿ ಮುಷ್ಕರ ನಿರತರು ರಸ್ತೆ, ರೈಲು ಸಂಚಾರಕ್ಕೆ ತಡೆಯೊಡ್ಡಿದ, ಮಾರ್ಗ ಮಧ್ಯೆ ಟೈರ್‌ಗಳನ್ನು ಸುಟ್ಟು ಹಾಕಿರುವ ಘಟನೆಗಳು ನಡೆದಿವೆ. ಕೇರಳದಲ್ಲಿ ಸರ್ಕಾರಿ ಸ್ವಾಮ್ಯದ ಕೆಎಸ್ಸಾರ್ಟಿಸಿ ಸೇರಿದಂತೆ ಬಹುತೇಕ ವಾಹನಗಳು ಬೀದಿಗಿಳಿಯಲಿಲ್ಲ. ಬೆರಳೆಣಿಕೆಯ ಆಟೋಗಳು ಮತ್ತು ಖಾಸಗಿ ವಾಹನಗಳಷ್ಟೇ ಕಂಡುಬಂದವು. ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
Related Articles
Advertisement
ದಕ್ಷಿಣದ ರಾಜ್ಯಗಳಲ್ಲಿ ಬಂದ್ ಎಫೆಕ್ಟ್ ಇಲ್ಲ:ಕೇರಳ ಹೊರತುಪಡಿಸಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲೂ ಬಂದ್ ಹೇಳಿಕೊಳ್ಳುವಂತಹ ಪರಿಣಾಮವನ್ನು ಬೀರಲಿಲ್ಲ. ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತಿತರ ರಾಜ್ಯಗಳಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳು ನಡೆದಿದ್ದು ಬಿಟ್ಟರೆ, ಜನಜೀವನ ಎಂದಿನಂತೆ ಸಾಗಿದೆ. ತ.ನಾಡಿನ ಕೊಯಮತ್ತೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಗೆ ಯತ್ನಿಸಿದ ಎಡಪಕ್ಷಗಳ ಇಬ್ಬರು ಸಂಸದರು ಸೇರಿದಂತೆ ಒಟ್ಟು 800 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದರು. ಎಟಿಎಂಗಳು ಖಾಲಿ ಖಾಲಿ
ಬುಧವಾರದ ಮುಷ್ಕರದಿಂದಾಗಿ ದೇಶಾದ್ಯಂದ ಬ್ಯಾಂಕು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಪಂಜಾಬ್, ಹರ್ಯಾಣ, ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬ್ಯಾಂಕ್ ಸೇವೆಗಳಿಲ್ಲದೇ ಜನರು ಪರದಾಡುವಂತಾಯಿತು. ಸಂಜೆ ವೇಳೆಗೆ ಬಹುತೇಕ ಎಟಿಎಂಗಳು ಖಾಲಿಯಾದವು. ಹೀಗಾಗಿ, ಹಣ ವಿತ್‌ಡ್ರಾ ಮಾಡಲು ಬಂದ ಜನರು ಅತಂತ್ರರಾದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಸುಮಾರು 12 ಸಾವಿರ ನೌಕರರು ಕೂಡ ಮುಷ್ಕರದಲ್ಲಿ ಭಾಗಿಯಾಗಿದ್ದರು. ಹಿಂಸಾಚಾರ, ಬೆಂಕಿ: 55 ಮಂದಿ ಬಂಧನ
ಪಶ್ಚಿಮ ಬಂಗಾಳದಲ್ಲಿ ಕಾರ್ಮಿಕರು ಮುಷ್ಕರವು ಹಿಂಸಾಚಾರಕ್ಕೆ ತಿರುಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ‡. ಮುಷ್ಕರನಿರತರು ಮಾರ್ಗ ಮಧ್ಯೆ ಟೈರ್ ಸುಟ್ಟು ಪ್ರತಿಭಟನೆ ನಡೆಸಿದ್ದು, ಅವರನ್ನು ಪೊಲೀಸರು ತಡೆಯುತ್ತಿದ್ದಂತೆ, ಪೊಲೀಸರ ಮೇಲೆ ಕಲ್ಲುತೂರಾಟ ಹಾಗೂ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ. ಅಷ್ಟೇ ಅಲ್ಲದೆ, ಬಸ್ಸುಗಳು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಸರ್ಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡಿದ್ದಾರೆ. ಕೊನೆಗೆ ಪೊಲೀಸರು, ಅಶ್ರುವಾಯು ಸಿಡಿಸಿ, ಲಾಠಿಪ್ರಹಾರ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.