Advertisement

ನೃತ್ಯಾಮೃತಂದಲ್ಲಿ ಕೃತಿಗಳ ನೃತ್ಯಾರ್ಪಣೆ

06:00 AM Nov 30, 2018 | Team Udayavani |

ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳ ಕುರಿತು ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದವರು ಹಿರಿಯ ಸಂಗೀತ ಗುರುಗಳಾದ
ವಿ| ಎಮ್‌. ನಾರಾಯಣರು.ಇವರ ಸಾಹಿತ್ಯವನ್ನು ನೃತ್ಯಾರ್ಪಣೆ ಮಾಡುವಲ್ಲಿ ಶ್ರಮಿಸಿದವರು ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ ಇಲ್ಲಿನ ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್‌ರವರು. ನಾರಾಯಣರ ಏಳು ಕೃತಿಗಳಿಗೆ ನೃತ್ಯ ಸಂಯೋಜಿಸಿ ಕಲಾಸಕ್ತರ ಮೆಚ್ಚುಗೆ ಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

ಭರತಾಂಜಲಿಯ ನೃತ್ಯ ವಿದ್ಯಾರ್ಥಿಗಳು ಪುರಭವನದಲ್ಲಿ ನಾರಾಯಣದಾಸ ಕೃತಿಗಳಿಗೆ ನೃತ್ಯ ಲೇಪನ ಮಾಡಿ ಗುರು ನಾರಾಯಣೆ, ನಿರ್ದೇಶಕಿ ಪ್ರತಿಮಾ ಶ್ರೀಧರ್‌ರವರವರಲ್ಲಿ  ಭರವಸೆಯನ್ನು ಮೂಡಿಸಿದ್ದಾರೆ. ಆರಂಭದಲ್ಲಿ ಪರಿಪಾಲಯ ಸಿದ್ದಿವಿನಾಯಕ ರಾಗ ಮೋಹನ, ರೂಪಕತಾಳದಲ್ಲಿ ಹಟ್ಟಿಯಂಗಡಿ ಸಿದ್ದಿವಿನಾಯಕ ಗಣಪತಿಯ ಕುರಿತು ಸಂಯೋಜಿಸಲಾಗಿದ್ದು ಈ ನೃತ್ಯವನ್ನು ಭರತಾಂಜಲಿಯ ಕಲಾವಿದೆ ವಿ| ಪ್ರಕ್ಷಿಲಾ ಜೈನ್‌ ಪ್ರಸ್ತುತಪಡಿಸಿದರು. ಸ್ವರ ಹಾಗೂ ಸಾಹಿತ್ಯಗಳಿಗೆ ಪೂರಕ ನೃತ್ತ ಹಾಗೂ ನೃತ್ಯವನ್ನು ಅಳವಡಿಸಿ ಭರವಸೆಯನ್ನು ತಂದಿರುತ್ತಾರೆ. ಅನಂತರ ಮೂಡಿಬಂದ ಕದನ ಕೂತೂಹಲ ರಾಗ ಆದಿತಾಳದ ಜತಿಸ್ವರ ಭರತನಾಟ್ಯದ ಹಿರಿಯ ದಿಗ್ಗಜರು ರಚಿಸಿದ ಜತಿಸ್ವರಕ್ಕೆ ಸರಿಸಾಟಿ ಎನಿಸಿ ಪೈಪೋಟಿಯನ್ನು ಕೊಡುವಂತಿತ್ತು. ವಿದ್ಯಾರ್ಥಿಗಳು ಸಮೂಹ ನೃತ್ಯದಲ್ಲಿ ಏಕಪ್ರಕಾರವಾಗಿ ನರ್ತಿಸಿ ಪ್ರದರ್ಶನವನ್ನು ನೀಡಿದ್ದಾರೆ. ಮುಂದಿನ ಪ್ರಸ್ತುತಿ ದೇವಿ ಸ್ತುತಿ. ಈ ಕೃತಿಯಲ್ಲಿ ಸರಸ್ವತಿಯ ಸುತಿ ಪ್ರಧಾನವಾಗಿದ್ದು ಮೋಹನ ಕಲ್ಯಾಣಿ ರಾಗದ ರೂಪಕ ತಾಳದಲ್ಲಿ ಸಂಯೋಜಿಸಲಾಗಿದೆ. ಈ ನೃತ್ಯದಲ್ಲಿ ಸಾಮಗಾನ ವಿನೋದಿನಿಯ ಸಾಹಿತ್ಯಕ್ಕೆ ಶಾರದೆಯ ನಾನಾ ಭಂಗಿಗಳನ್ನು ಪೂರಕವಾಗಿ ಜೋಡಿಸಿ ಕಳೆಯನ್ನು ತಂದುಕೊಟ್ಟಿದೆ. ಭರತನಾಟ್ಯ ನೃತ್ಯ ಪ್ರಕಾರಗಳಲ್ಲಿ ಕ್ಲಿಷ್ಟಕರವಾದ ನೃತ್ಯ ಪದವರ್ಣ. ನಾರಾಯಣರವರು ರಚಿಸಿದ ಪದವರ್ಣವು ಏಕವ್ಯಕ್ತಿ ಪ್ರದರ್ಶನಕ್ಕೆ ಮೀಸಲಾಗಿದ್ದರೂ ಹಿರಿಯ ವಿದ್ಯಾರ್ಥಿಗಳು ಸಮೂಹ ನೃತ್ಯ ಪ್ರದರ್ಶನದೊಂದಿಗೆ ನರ್ತಿಸಿ ವರ್ಣದ ಹಿರಿಮೆಗೆ ಚ್ಯುತಿ ಬಾರದಂತೆ ಕಾಯ್ದುಕೊಂಡರು. ಪದವರ್ಣದ ಸಾಹಿತ್ಯದ ಜೀವಾಳವಾಗಿರುವ ಅರುಣಾಸುರನ ವಧೆಯ ಸಂಚಾರಿ ಕಥೆಯನ್ನು ನಿರೂಪಿಸುತ್ತಿದ್ದರೆ ಪ್ರೇಕ್ಷಕರ ಮನಸ್ಸನ್ನು ಸ್ಪಂದಿಸ್ಲ ಪ್ರಯತ್ನರಾಗಬಹುದಿತ್ತು. 

 ನಂತರದ ಗಣೇಶ ಸ್ತುತಿ ಗುರು ನಾರಾಯಣರ ವಾಸಸ್ಥಳವಾದ ಗಣೇಶಪುರ ದೇವಳದ ಶ್ರೀ ಮಹಾಗಣಪತಿ ಸ್ತುತಿ ಈ ಸ್ತುತಿಗೆ ಜತಿ ಅಪ್ರಸ್ತುತವಾಗಿದ್ದರೂ ವಿದ್ಯಾರ್ಥಿಗಳನ್ನು ನರ್ತನದಲ್ಲಿ ಮೇಳೈಸುವಾಗ ನೃತ್ಯದ ಪ್ರಸ್ತುತಿಗೆ ಒಂದು ಹೊಸತನವನ್ನು ತಂದಿರಿಸಿದೆ. ತದನಂತರ ಬಂದ ದೇವಿಸ್ತುತಿ ಮಧ್ಯಮಾವತಿ ಮಿಶ್ರಛಪು ತಾಳದಲ್ಲಿ ಸಂಯೋಜಿಸಿದ ಈ ಸಾಹಿತ್ಯವನ್ನು ತೆಲುಗು ಹಾಗೂ ಸಂಸ್ಕೃತ ಮಿಶ್ರಣದೊಂದಿಗೆ ರಚಿಸಲಾಗಿದ್ದು, ಭಾವಪೂರ್ವಕವಾಗಿ ಮೂಡಿಬಂದಿದೆ. ನೃತ್ಯದ ಕೊನೆಗೆ ತಿಲ್ಲಾನವೆ ಭೂಷಣ. ಇಲ್ಲಿ ಅಯ್ಕೆ ಮಾಡಿದ ತಿಲ್ಲಾನವು ನಾಟಿಕುರುಂಜಿ ರೂಪಕ ತಾಳದಲ್ಲಿ ರಚಿತವಾಗಿದೆ. ತಿಲ್ಲಾನದ ಸಂಸ್ಕೃತಿಯಂತೆ ನರ್ತಕಿಯರ ಅಂಗಶುದ್ಧತೆ, ನೃತ್ಯಭಂಗಿ ಹಾಗು ಚುರುಕು ಚಲನೆಯೊಂದಿಗೆ ಪ್ರೇಕ್ಷಕರ ಮನಸ್ಸನ್ನು ಮುಟ್ಟಿತು. ಕೊನೆಯಲ್ಲಿ ಮಂಗಲ ನೃತ್ಯದಲ್ಲಿ ಅಷ್ಟೂ ಕಲಾವಿದರನ್ನು ರಂಗದಲ್ಲಿ ಬಳಸಿಕೊಂಡ ರೀತಿ ಮಾದರಿಯಾಗಿ ಮೂಡಿಬಂತು. ಹಾಡುಗಾರಿಕೆಯಲ್ಲಿ ನಾರಾಯಣ್‌ರ ಹಿರಿಯ ಶಿಷ್ಯೆ ವಿ| ಶೀಲಾ ದಿವಾಕರ್‌ ಶುದ್ಧ ನಿರರ್ಗಳ ಸಾಹಿತ್ಯದೊಂದಿಗೆ ಭಾವಪೂರ್ಣವಾಗಿ ಹಾಡಿದರು. ಮೃದಂಗ ಬಾಲಚಂದ್ರ ಭಾಗವತ್‌, ಮೋರ್ಸಿಂಗ್‌ನಲ್ಲಿ ವಿ| ಬಾಲಕೃಷ್ಣ ಪುತ್ತೂರು ಸಹಕರಿಸಿದ್ದಾರೆ. ಶ್ರೀಧರ ಆಚಾರ್ಯ ಪಾಡಿಗಾರ್‌ ಪಿಟೀಲು ವಾದನ ಅಪ್ಯಾಯಮಾನವಾಗಿತ್ತು.  

 ವಿ|ಚಂದ್ರಶೇಖರ ನಾವಡ 

Advertisement

Udayavani is now on Telegram. Click here to join our channel and stay updated with the latest news.

Next