ಕು| ಅನುಷಾ ಜೈನ್ ನೆಲ್ಯಾಡಿ ಇವರ ನೃತ್ಯಂ ಸಮರ್ಪಯಾಮಿ ಭರತ ನಾಟ್ಯ ಕಾರ್ಯಕ್ರಮ ಇತ್ತೀಚೆಗೆ ಪುತ್ತೂರಿನ ನಟರಾಜ ವೇದಿಕೆಯಲ್ಲಿ ನಡೆಯಿತು. ಮೊದ ಲಿಗೆ ಪುಷ್ಪಾಂಜಲಿಯಲ್ಲಿ ರಾಗ ಹಂಸಧ್ವನಿ, ತಿಶ್ರ, ತ್ರಿಪುಟತಾಳದಲ್ಲಿ ಪುಷ್ಪಾಂಜಲಿ ಎಂದರೆ ಕೈಯಲ್ಲಿ ಪುಷ್ಪಪುಟ ಹಸ್ತದಲ್ಲಿ ಪುಷ್ಪಗಳನ್ನು ಹಿಡಿದು ರಂಗಾದಿ ದೇವತೆಗಳಿಗೆ ನಟರಾಜನಿಗೆ ಪುಷ್ಪಗಳನ್ನು ಅರ್ಪಿಸಿ ಎಲ್ಲರಿಗೆ ವಂದಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥಿಸುವಂತಹ ಒಂದು ಸುಂದರ ನೃತ್ಯಬಂಧವಾಗಿದೆ. ಇದರಲ್ಲಿ ಕ್ಲಿಷ್ಟಕರವಾದ ಅಡವುಗಳು ಇದ್ದು ತಿಶ್ರ ತ್ರಿಪುಟ. ಅದು ಇನ್ನೊಂದು ರೀತಿಯಲ್ಲಿ ಮಿಶ್ರ ಛಾಪು ತಾಳದ ಮತ್ತೂಂದು ಪರಿಕಲ್ಪನೆಯಾಗಿತ್ತು. ಅದಕ್ಕೆ ಬೇರೆ ಬೇರೆ ಪಂಚನಡೆಯಲ್ಲಿ ಹೆಜ್ಜೆ ವಿನ್ಯಾಸಗಳನ್ನು ಅಳವಡಿಸಲಾಗಿತ್ತು. ವಿಶೇಷ ಎಂದರೆ ಮುಂದಿನ ಶ್ಲೋಕದ ನೃತ್ಯವನ್ನು ವೇದಿಕೆಯಿಂದ ನಿರ್ಗಮಿಸಿದೇ ಮಾಡಿದ್ದು. ಶ್ರೀ ಕಾಂತೋ ಮಾತಲೋ ಯಸ್ಯ ಜನನೀ…ಸರ್ವಮಂಗಳಾ ಜನಕ ಶಂಕರಾ ದೇವಾ… ಯಾವನಿಗೆ ವಿಷ್ಣುವು ಸೋದರ ಮಾವನಾಗಿದ್ದನೋ ಯಾರಿಗೆ ಸರ್ವ ಮಂಗಳೆಯ ತಾಯಿಯಾಗಿದ್ದಾಳ್ಳೋ ಯಾರಿಗೆ ಶಿವನು ತಂದೆಯಾಗಿದ್ದಾನೆಯೋ ಅಂತಹ ವಿಘ್ನವಿನಾಯಕ ಗಣಪತಿಗೆ ವಂದಿಸುವೆನು. ಈ ಪ್ರತಿಯೊಂದು ಸಾಲಿನಲ್ಲೂ ಚಿಕ್ಕ ಚಿಕ್ಕ ಕಥೆಗಳನ್ನು ಬಹಳ ಸೊಗಸಾಗಿ ಅಳವಡಿಸಲಾಗಿತ್ತು.
ಅನಂತರ “ಮುದಾಕರಾಕ್ತ ಮೋದಕಂ’ ಹಾಡು. ಇದು ರಾಗಮಾಲಿಕೆ ಹಾಗೂ ತಿಶ್ರ ನಡೆ ಆದಿತಾಳದಲ್ಲಿದೆ. ಈ ನೃತ್ಯದಲ್ಲಿ ಐದು ಚರಣಗಳಲ್ಲಿ ಅಳವಡಿಸಿದ ವಿವಿಧ ರೀತಿಯ ತಟ್ಟು ಮೆಟ್ಟುಗಳು ಬಹಳಷ್ಟು ಮೆಚ್ಚುವಂತದ್ದು. ಮೂರನೆಯ ನೃತ್ಯ ನಾಟ್ಯ ನೀಲಾಂಜನೇ. ಡಿ.ವಿ.ಜಿ ಯವರ ಅಂತಪುರ ಗೀತೆಯಿಂದ ಪ್ರೇರೇಪಿತರಾಗಿ ಜೈನ ಸಾಹಿತಿಯಲ್ಲಿ ಪಂಪನ ಆದಿ ಪುರಾಣದಲ್ಲಿ ಬರುವಂತಹ ಒಂದು ಪಾತ್ರ ನೀಲಾಂಜನೆ ಎಂಬ ಅಪ್ಸರ ಸ್ತ್ರೀಯ (ನೃತ್ಯಗಾತಿಯ) ವರ್ಣನೆ ಮಾಡಲಾಗಿದೆ. ನೀಲಾಂಜನೆಯ ಓರ್ವ ಸಖೀಯಾಗಿ ಕಲಾವಿದೆಯು ನೀಲಾಂಜನೆಯೊಂದಿಗೆ ಸರಸ ಸಂಭಾಷಣೆಯನ್ನು ಮಾಡುವಂತಹ ನೃತ್ಯ ಇದಾಗಿದೆ. ನಾಟ್ಯ ವಿಲಾಸ, ನವಭಾವ ರಾಗದಿಂದ ಕೂಡಿದ ನಿನ್ನ ಅಭಿನಯವೇನೆಂದು ವರ್ಣಿಸಲಾಗಿದೆ. ನಂತರ ಮುಖ್ಯ ನೃತ್ಯ ಬಂಧವಾಗಿ ಮೂಡಿ ಬಂದದ್ದು ಪದವರ್ಣ. ಇದು ಷಣ್ಮುಖ ಪ್ರಿಯರಾಗ ಆದಿತಾಳ ವೀಣೇ ಶೇಷ ಅಯ್ಯರ್ ರಚಿಸಿದ ದೇವಾದಿ ದೇವ ನಟರಾಜ ಚಿದಂಬರ ದೇವಸ್ಥಾನದಲ್ಲಿರುವ ನಟರಾಜನ ವರ್ಣನೆಯನ್ನು ಮಾಡಲಾಗಿದೆ. ವರ್ಣದಲ್ಲಿ ಅನಾಯಾಸವಾಗಿ ಸುಮಾರು ಮೂವತ್ತರಿಂದ ನಲುವತ್ತು ನಿಮಿಷಗಳ ಕಾಲ ನೃತ್ಯ ಮಾಡಿದ್ದು ಸಾಧನೆಗೆ ಹಿಡಿದ ಕನ್ನಡಿ.
ನಂತರದ ಹಾಡು ಹಿಂದಿಯದ್ದಾಗಿದ್ದು ಮಯ್ನಾ ಮೋರೆ ಮೇ ನಾಯಿ ಖಾಯೇ… ಕೃಷ್ಣ ಬೆಣ್ಣೆ ಕದ್ದು ತಿನ್ನುವ ಸನ್ನಿವೇಶ. ಕೊನೆಯ ನೃತ್ಯ ತಿಲ್ಲಾನ. ಇದು ಖ್ಯಾತ ವಯಲಿನ್ ವಾದಕರಾದ ಲಾಲ್ಗುಡಿ ಡಿ. ಜಯರಾಮ ಅವರ ರಚನೆಯಾಗಿದೆ. ಆದಿತಾಳ ಸುಂದರವಾದ ಅಡವು ಅಲ್ಲದೆ ಗೆತ್ತು ಅಂದರೆ ಸವಾಲ್, ಜವಾಬ್, ಜುಗಲ್ ಬಂದಿಯ ರೀತಿಯಲ್ಲಿದೆ. ಶೊಲ್‌ಕಟ್‌ಗಳನ್ನು ಬಾಯಲ್ಲಿ ಹೇಳಲಾಗುತ್ತದೆ. ಅದಕ್ಕೆ ಸರಿಯಾಗಿ ಮೃದಂಗ, ನಟುವಾಂಗ, ಹೆಜ್ಜೆ ಗೆಜ್ಜೆ ಶಬ್ಧದ ಪ್ರಸ್ತುತಿ ಕೊನೆಯಲ್ಲಿ ಎಲ್ಲಾರು ಒಟ್ಟಿಗೆ ನುಡಿಸಿ, ನರ್ತಿಸಿ ಮುಕ್ತಾಯವಾಗುತ್ತದೆ. ಇದು ಬಹಳ ನಯನ ಮನೋಹರವಾದ ಪ್ರಸಂಗ. ಕೊಳಲಿನಲ್ಲಿ ಕಾಂಞಗಾಡ್ ರಾಜಗೋಪಾಲ್ , ಮೃದಂಗದಲ್ಲಿ ಗೀತೇಶ್, ನೀಲೇಶ್ವರ ಸಾಥ್ ನೀಡಿದ್ದಾರೆ.
ವೇಣಿಪ್ರಸಾದ್