ನವದೆಹಲಿ: ಸರಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆ ಭಾರತೀಯ ಸಂಚಾರಿ ನಿಗಮ ಲಿಮಿಟೆಡ್ ತನ್ನ ಗ್ರಾಹಕರಿಗಾಗಿ ಎರಡು ವಿನೂತನ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಪರಿಚಯಿಸಿದೆ. 299 ಹಾಗೂ 491 ರೂಪಾಯಿಗಳಿಂದ ಪ್ರಾರಂಭಗೊಳ್ಳುವ ಈ ಯೋಜನೆಗಳಲ್ಲಿ ಗ್ರಾಹಕರಿಗೆ ಅನಿಯಮಿತ ಸೌಲಭ್ಯಗಳು ಲಭ್ಯವಾಗಲಿವೆ.
ಆರು ತಿಂಗಳ ವ್ಯಾಲಿಡಿಟಿ ಪ್ಯಾಕೇಜ್ ಇದಾಗಿದ್ದು ಇದರಲ್ಲಿ ಗ್ರಾಹಕರಿಗೆ 20ಎಂಬಿಪಿಎಸ್ ವೇಗದ ಇಂಟರ್ನೆಟ್ ಸೌಲಭ್ಯ ಲಭಿಸಲಿದೆ. ಮಾತ್ರವಲ್ಲದೇ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಮೂಲಕ ಯಾವುದೇ ನೆಟ್ ವರ್ಕ್ ಗಳಿಗೆ ಅನಿಯಮಿತ ಕರೆಗಳನ್ನು ಮಾಡುವ ಸೌಲಭ್ಯ ಲಭಿಸಲಿದೆ. ಡಿಸೆಂಬರ್ 27ರಿಂದ ಈ ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ.
299 ರೂಪಾಯಿಗಳ ಯೋಜನೆಯಲ್ಲಿ 20 ಎಂಬಿಪಿಎಸ್ ವೇಗದ 50 ಜಿಬಿ ಡಾಟಾ ಮತ್ತು ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ನಿಂದ ಅನಿಯಮಿತ ಕರೆಗಳ ಸೌಲಭ್ಯವನ್ನು ನೀಡಲಾಗುತ್ತಿದೆ. ಇನ್ನು 491 ಬ್ರಾಡ್ ಬ್ಯಾಂಡ್ ಯೋಜನೆಯಲ್ಲಿ 120 ಜಿಬಿ ಎಫ್.ಯು.ಪಿ. ಲಿಮಿಟ್ ಡಾಟಾ ಸಿಗಲಿದೆ ಹಾಗೂ ಅನಿಯಮಿತ ಕರೆ ಸೌಲಭ್ಯ ಲಭಿಸಲಿದೆ.
ಮತ್ತು ಆರು ತಿಂಗಳುಗಳ ಬಳಿಕ ಬಿ.ಎಸ್.ಎನ್.ಎಲ್. ತನ್ನ 491 ರೂಪಾಯಿಗಳ ಯೋಜನೆಯನ್ನು 3ಜಿಬಿ ಸಿಯುಎಲ್ ಬ್ರಾಡ್ ಬ್ಯಾಂಡ್ ಯೋಜನೆಗೆ ತನ್ನಿಂತಾನೆ ವರ್ಗಾವಣೆಗೊಳ್ಳಲಿದೆ.
ಬಿ.ಎಸ್.ಎನ್.ಎಲ್. ಇತ್ತೀಚೆಗಷ್ಟೇ 777 ರೂಪಾಯಿಗಳ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಅನ್ನು ಮರುಪರಿಚಯಿಸಿದೆ. ಇದರಲ್ಲಿ 50 ಎಂಬಿಪಿಎಸ್ ವೇಗದ 500 ಜಿಬಿ ಗ್ರಾಹಕರಿಗೆ ಲಭ್ಯವಾಗಲಿದೆ.
ಇನ್ನು ಹೊಸ ಸಂಪರ್ಕವನ್ನು ಪಡೆದಕೊಳ್ಳಲು ಬಯಸುವ ಗ್ರಾಹಕರಿಗೆ ಸೆಕ್ಯುರಿಟಿ ಡಿಪಾಸಿಟ್ ರೂಪದಲ್ಲಿ 500 ರೂಪಾಯಿಗಳನ್ನು ನಿಗದಿಮಾಡಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಇನ್ ಸ್ಟಾಲೇಷನ್ ಶುಲ್ಕಗಳು ಇರುವುದಿಲ್ಲ.