ಕೋಲ್ಕತಾ: ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ಅವರಿಗೆ ಭಾರತ ರತ್ನ ಪ್ರಧಾನ ಮಾಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಎತ್ತಿದ್ದಾರೆ.
ಕೋಲ್ಕತಾದಲ್ಲಿ ನಡೆದ 28ನೇ ಕೋಲ್ಕತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಲ್ಲಿ ಮಮತಾ ಬ್ಯಾನರ್ಜಿ ಅಭಿಮಾನಿಗಳೆಲ್ಲರ ಸಮ್ಮುಖದಲ್ಲಿ ”ಅಮಿತಾಬ್ ಬಚ್ಚನ್ ಅವರು ಲೆಜೆಂಡ್, ಜೀವಂತ ದಂತಕಥೆ ಎಂದು ನಾನು ಭಾವಿಸುತ್ತೇನೆ. ಅವರು ಭಾರತದ ಐಕಾನ್. ಅವರಿಗೆ ಭಾರತ ರತ್ನ ನೀಡಬೇಕು” ಎಂದರು.
“ಅಧಿಕೃತವಾಗಿ ಅಲ್ಲದಿದ್ದರೂ ಬಂಗಾಳ, ಅಮಿತಾಬ್ ಜಿ ಪರ ಭಾರತ ರತ್ನಕ್ಕಾಗಿ ಧ್ವನಿ ಎತ್ತುತ್ತೇವೆ. ಅವರಿಗೆ ಭಾರತ ರತ್ನ ನೀಡಬೇಕು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗೆ ಸಾಟಿಯಿಲ್ಲ. ಅವರಿಗೆ ಧನ್ಯವಾದಗಳು…ಎಂದಿದ್ದಾರೆ.
ಸಮಾರಂಭದಲ್ಲಿ ಅಮಿತಾಬ್ ಅವರು “ಪಠಾಣ್’ ಸಿನಿಮಾದ “ಬೇಷರಮ್ ರಂಗ್’ ಹಾಡಿನ ದೃಶ್ಯಗಳ ಕುರಿತು ಎದ್ದಿರುವ ವಿವಾದದ ಕುರಿತು ಪ್ರತಿಕ್ರಿಯಿಸಿ, ”ಸಿನಿಮಾ ಸೆನ್ಸಾರ್‌ಶಿಪ್‌ಗಾಗಿ 1952ರಲ್ಲಿ ಸಿನಿಮಾಟೋಗ್ರಾಫರ್ ಕಾಯಿದೆ ರಚಿಸಲಾಯಿತು. ಫಿಲ್ಮ್ ಸರ್ಟಿಫಿಕಲೇಶನ್ ಬೋರ್ಡ್ ಸಿನಿಮಾ ಸೆನ್ಸಾರ್ ಕಾರ್ಯ ನಿರ್ವಹಿಸುತ್ತಿದೆ. ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಈಗಲು ಪ್ರಶ್ನೆಗಳು ಏಳುತ್ತವೆ” ಎಂದು ಹೇಳಿದ್ದರು.
ಇದೇ ವೇಳೆ ಮಾತನಾಡಿದ ನಟ ಶಾರುಕ್ ಖಾನ್, “ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕತೆ ಹರಡುವುದು ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ. ಸಂಕುಚಿತ ಮನೋಭಾವದಿಂದ ವಿಚಾರಗಳನ್ನು ನೋಡಲಾಗುತ್ತಿದೆ. ಜಗತ್ತು ಏನಾದರು ಆಗಲಿ, ಆದರೆ ಈಗಲೂ ಸಕಾರಾತ್ಮಕ ವ್ಯಕ್ತಿಗಳು ಜೀವಂತವಾಗಿದ್ದಾರೆ.’ ಎಂದು ಹೇಳಿದ್ದರು.