ಮುಂಬಯಿ, ಸೆ. 24: ಮಹಾರಾಷ್ಟ್ರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಕೊಡಮಾಡುವ ಸಹಕಾರಿ ಕ್ಷೇತ್ರದ ಮಹಾರಾಷ್ಟ್ರ ರಾಜ್ಯದ “ಸರ್ವೋತ್ಕೃಷ್ಟ ಬ್ಯಾಂಕ್ ಸಾಧಕ’ ಪುರಸ್ಕಾರವು ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಭಾರತ್ ಕೋ ಆಪರೇಟಿವ್ ಬ್ಯಾಂಕ್‌ಗೆ ಲಭಿಸಿದೆ.
ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್‌ನ 40ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 24ರಂದು ವಡಾಲದ ಭಾರತೀಯ ಕ್ರೀಡಾ ಮಂದಿರ ಸಂಕುಲದ ಸಭಾಗೃಹದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯ ಸಹಕಾರಿ ಆಯುಕ್ತ ಡಾ| ಜಗದೀಶ್ ಪಾಟೀಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾರತ್ ಬ್ಯಾಂಕಿನ ಆಡಳಿತ ನಿರ್ದೇಶಕ, ಸಿಇಒ ಸಿ. ಆರ್ ಮೂಲ್ಕಿ, ಬ್ಯಾಂಕ್‌ನ ನಿಯೋಜಿತ ಆಡಳಿತ ನಿರ್ದೇಶಕ ವಿದ್ಯಾನಂದ ಎಸ್. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್ ಅವರಿಗೆ ಪುರಸ್ಕಾರ ಫಲಕ ಪ್ರದಾನಿಸಿ ಶುಭಹಾರೈಸಿದರು. ಫೆಡರೇಶನ್‌ನ ಕಾರ್ಯಾಧ್ಯಕ್ಷ ವಿದ್ಯಾಧರ್ ಅನಸ್ಕರ್, ಉಪ ಕಾರ್ಯಾಧ್ಯಕ್ಷ ರಮಾಕಾಂತ್ ಖೇತನ್ ಹಾಗೂ ಸಂಚಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದು ಭಾರತ್ ಬ್ಯಾಂಕಿನ ಆರ್ಥಿಕ ಸೇವೆಯನ್ನು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ಸ್ ಫೆಡರೇಶನ್‌ನ ಸಂಚಾಲಕರಾದ ಸಂಸದ ಆನಂದ್‌ರಾವ್ ಆಡ್ಸೂಲ್, ಸತೀಶ್ ಗುಪ್ತಾ, ಸಂದೀಪ್ ಘಂದಟ್, ಜ್ಞಾನೇಶ್ವರ್ ವಾಂಗಡೆ, ಅಮೃತ್ ಜೋಶಿ, ದಾಮೋದರ್ ಮಾಜ್‌ಗಾಂವ್ಕರ್, ಸುನೀಲ್ ದೆವಡಾ, ಜಗದೀಶ್ , ಕೈಲಾಶ್ಚಂದ್ರ ಅಗ್ರವಾಲ್, ಜಯವಂತ್ ಜಲಗಾಂವ್ಕರ್, ಅಶೋಕ್ ಶೇಳ್ಕೆ, , ಭಾಸ್ಕರ್ ರಾವ್ ಕೊಠಾವದೆ, ಶೋಭಾ ಸಾವಂತ್, ಡಾ| ಶಶಿ ಅಯಿರೆ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಫೆಡರೇಶನ್‌ನ ಸಿಇಒ ಸಾಯಿಲೀ ಭೋಯಿರ್ ಕಾರ್ಯಕ್ರಮ ನಿರೂಪಿಸಿದರು. ರಮಾಕಾಂತ್ ಖೇತನ್ ವಂದಿಸಿದರು.
ಈ ಗೌರವಕ್ಕೆ ಭಾರತ್ ಬ್ಯಾಂಕಿನ ಭಾಜನವಾಗಿರುವುದು ಅಭಿನಂದನೀಯ. ಇದು ಗ್ರಾಹಕರು ಮತ್ತು ಷೇರುದಾರರು, ನಿರ್ದೇಶಕ ಮಂಡಳಿ ಹಾಗೂ ನೌಕರ ವೃಂದದ ಅವಿರತ ಶ್ರಮಕ್ಕೆ ಸಂದ ಗೌರವ ಎಂದು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ತಿಳಿಸಿದ್ದಾರೆ. ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ಹಾಗೂ ನಿರ್ದೇಶಕರು ಪ್ರಶಸ್ತಿಗಾಗಿ ಹರ್ಷ ವ್ಯಕ್ತಪಡಿಸಿದರು.
– ಚಿತ್ರ-ವರದಿ: ರೋನ್ಸ್ ಬಂಟ್ವಾಳ್