ಮುಂಬಯಿ: ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯು ವಾರ್ಷಿಕವಾಗಿ ಪ್ರದಾನಿಸುವ “ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ಕ್ಕೆ ಈ ಬಾರಿಯೂ ತುಳು ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆ ಆಯ್ಕೆಗೊಂಡಿದೆ ಎಂದು ಬ್ಯಾಂಕ್ಸ್ ಅಸೋಸಿಯೇಶನ್ ಪ್ರಕಟಿಸಿದೆ.
ರಾಷ್ಟ್ರದ ಆರ್ಥಿಕ ರಾಜಧಾನಿ, ವಾಣಿಜ್ಯ ನಗರಿ ಬೃಹನ್ಮುಂಬಯಿಯ ಬ್ಯಾಂಕ್ ಅಸೋಸಿಯೇಶನ್ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ, ಗುಣಮಟ್ಟದ ಬ್ಯಾಂಕ್‌ಗಳ ಸೇವಾ ವೈಖರಿಯನ್ನು ಮಾನದಂಡ ಆಗಿಸಿ ವಾರ್ಷಿಕವಾಗಿ ಕೊಡಮಾಡುವ ಕಳೆದ 2015-2016ರ ಕ್ಯಾಲೆಂಡರ್ ಸಾಲಿನಲ್ಲಿ ಎರಡು ಸಾವಿರದ ಒಂದು ಕೋ. ರೂ. ಗಳ ಮೊತ್ತಕ್ಕಿಂತ ಅಧಿಕ ಠೇವಣಿ ವ್ಯವಹಾರ ನಡೆಸಿದ ಸಹಕಾರಿ ಬ್ಯಾಂಕುಗಳಲ್ಲಿ ಭಾರತ್ ಬ್ಯಾಂಕ್ ಮತ್ತೆ “ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ಕ್ಕೆ ಭಾಜನವಾಗಿದೆ ಎಂದು ಬ್ಯಾಂಕ್ ಅಸೋಸಿಯೇಶನ್ ಅಧ್ಯಕ್ಷ ದತ್ತರಾಮ ಚಾಳ್ಕೆ ತಿಳಿಸಿದ್ದಾರೆ.
ಭಾರತ್ ಬ್ಯಾಂಕ್‌ನ ಸಾರ್ವಜನಿಕವಾಗಿ ಸ್ಪಂದಿಸುತ್ತ ಗ್ರಾಹಕರ ವಿಶ್ವಾಸನೀಯ ಮತ್ತು ಸರ್ವೋತ್ಕೃಷ್ಟ ಸೇವೆ, ಸಮಗ್ರ ಬೆಳವಣಿಗೆ ಮತ್ತು ಗುಣಮಟ್ಟದ ವಾರ್ಷಿಕ ವರದಿ ಪರಿಶೀಲಿಸಿದ ಅಸೋಸಿಯೇಶನ್ ಭಾರತ್ ಬ್ಯಾಂಕ್‌ನ ಸಹಕಾರಿ ರಂಗದ ವಿಶೇಷ ಕೊಡುಗೆಯನ್ನು ಪರಿಶೀಲಿಸಿ ಮತ್ತೆ ಈ ಬಾರಿಯೂ “ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ಕ್ಕೆ ಆಯ್ಕೆಗೊಳಿಸಿದ್ದು ತುಂಬಾ ಸಂತಸ ತಂದಿದೆ ಎಂದು ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ತಿಳಿಸಿದ್ದಾರೆ.
ಈ ಬಾರಿ ಮತ್ತೆ ಬ್ಯಾಂಕ್ಸ್ ಅಸೋಸಿಯೇಶನ್ ನಮ್ಮ ನಿಮ್ಮೆಲ್ಲರ ಭಾರತ್ ಬ್ಯಾಂಕ್‌ಗೆ “ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ನೀಡಿ ಗೌರವಿಸುತ್ತಿರುವುದು ಭಾರತ್ ಬ್ಯಾಂಕ್ ಪರಿವಾರದ ಹೆಮ್ಮೆಯಾಗಿದೆ ಎಂದು ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ತಿಳಿಸಿದ್ದಾರೆ.
ಆರ್‌ಬಿಐ ನಿರ್ದೇಶನ ಮತ್ತು ಮಾರ್ಗಸೂಚಿಯಂತೆ ಸೇವಾ ನಿರತಗೊಂಡ ಬ್ಯಾಂಕ್ ಗತಸಾಲಿನಲ್ಲೂ ಬ್ಯಾಂಕ್‌ನ ಪಾಲುದಾರಿಕೆ ಬಂಡವಾಳ 228.75 ಕೋ. ರೂ. ಗಳನ್ನು ಕಾಯ್ದಿರಿಸಿದ ಸ್ಥಿರನಿಧಿ 889.89 ಕೋ. ರೂ. ಗಳನ್ನು ಹೊಂದಿದೆ. ಬ್ಯಾಂಕ್‌ನ ನಿರ್ದೇಶಕ ಮಂಡಳಿ ಮತ್ತು ಉನ್ನತಾಧಿಕಾರಿಗಳು ಹಾಗೂ ನೌಕರ ವೃಂದದ ಸಹಯೋಗ ಮತ್ತು ಗ್ರಾಹಕರ ಅನನ್ಯ ವ್ಯವಹಾರದಿಂದ ಗತ ಕ್ಯಾಲೆಂಡರ್ ಸಾಲಿನಲ್ಲೂ ಬ್ಯಾಂಕ್ ಅತ್ಯುತ್ತಮ ಸಾಧನೆ ನಿರ್ವಹಿಸಿದ್ದು ಸರ್ವರ ಉತ್ತೇಜನಕ್ಕೆ ಅಭಿವಂದಿಸುತ್ತೇವೆ ಎಂದು ಸಿಇಒ ಮತ್ತು ಬ್ಯಾಂಕ್‌ನ ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 27ರಂದು ದಾದರ್ ಪೂರ್ವದ ಹೊಟೇಲ್ ಸಿಟಿ ಪಾಯಿಂಟ್ ಸಭಾಗೃಹದಲ್ಲಿ ನೇರವೇರಲಿದೆ ಎಂದು ಬ್ಯಾಂಕ್‌ನ ಉಪ ಪ್ರಧಾನ ಪ್ರಬಂಧಕರೂ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‌ದಾಸ್ ಹೆಜ್ಮಾಡಿ ತಿಳಿಸಿದ್ದಾರೆ.