Advertisement

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

11:50 PM Sep 27, 2021 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌ಗೆ 2 ರಾಜ್ಯ ಬಿಟ್ಟು ಉಳಿದ ಕಡೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಹೋರಾಟದ ಕೇಂದ್ರ ಬಿಂದುವಂತಿರುವ ಪಂಜಾಬ್‌ ಮತ್ತು ಹರಿಯಾಣದಲ್ಲಿ ಮಾತ್ರ ಬಂದ್‌ಗೆ ತಕ್ಕ ಮಟ್ಟಿನ ಬೆಂಬಲ ವ್ಯಕ್ತವಾಗಿದೆ. ಉಳಿದಂತೆ ದೇಶದ ಇತರೆಡೆಯಲ್ಲಿ ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ದಿಲ್ಲಿ ಗಡಿಯಲ್ಲಿ ರಸ್ತೆ ತಡೆದರು. ಇದರಿಂದಾಗಿ ಒಂದೂವರೆ ಕಿ.ಮೀ. ಉದ್ದಕ್ಕೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಇದು ಸೋಮವಾರ ರಾತ್ರಿ ವೇಳೆಗೆ ಸರಿಯಾಗಿದೆ. ಆದರೆ, ಹೊಸದಿಲ್ಲಿಯಲ್ಲಿ ಜನಜೀವನ ಸಹಜವಾಗಿಯೇ ಇತ್ತು.

25 ರೈಲುಗಳಿಗೆ ಅಡ್ಡಿ: ರೈತರು ಕರೆ ನೀಡಿದ್ದ ಈ ಬಂದ್‌ನಿಂದಾಗಿ 25 ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ದಿಲ್ಲಿ, ಅಂಬಾಲ ಮತ್ತು ಫಿರೋಜ್‌ಪುರ ವಿಭಾಗದ 20ಕ್ಕೂ ಹೆಚ್ಚು ರೈಲುಗಳು ಸಂಚಾರ ಸ್ಥಗಿತ ಮಾಡಿದ್ದವು.

ಎಲ್ಲ ಬಂದ್‌:  ದೇಶದ ಬೇರೆ ಭಾಗಗಗಳಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದ್ದರೂ, ಪಂಜಾಬ್‌ ಮತ್ತು ಹರಿಯಾಣದಲ್ಲೂ ಸಂಪೂರ್ಣ ಯಶಸ್ವಿಯಾಗಿದೆ. ಪಂಜಾಬ್‌ನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಖಾಲಿ ಹೊಡೆಯುತ್ತಿದ್ದವು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಹಾಗೆಯೇ ಹರಿಯಾಣದಲ್ಲೂ ಪ್ರತಿಭಟನಕಾರರು ಬಲವಂತದಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾ‌ದ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ:ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

Advertisement

ಈ ಎರಡು ರಾಜ್ಯಗಳನ್ನು ಬಿಟ್ಟರೆ, ಕಾಂಗ್ರೆಸ್‌, ಇತರ ಪ್ರಾದೇಶಿಕ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲೂ ಬಂದ್‌ಗೆ ಅಷ್ಟೇನೂ ಬೆಂಬಲ ವ್ಯಕ್ತವಾಗಲಿಲ್ಲ. ಕೆಲವೆಡೆ ಬಂದ್‌ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು.

ಈ ಬಗ್ಗೆ ಮಾತನಾಡಿದ ರೈತ ಮುಖಂಡ ರಾಕೇಶ್‌ ಟಿಕಾಯತ್‌, ಬಂದ್‌ಗೆ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಪಂದನೆ ಸಿಕ್ಕಿದೆ ಎಂದರು. ಜತೆಗೆ, ಒಂದು ದಿನ ನಾಗರಿಕರಿಗೆ ಸಮಸ್ಯೆಯಾದರೆ ಏನು ತೊಂದರೆಯಿಲ್ಲ ಎಂದು ಹೇಳಿದರು. ಬಂದ್‌ ಬಗ್ಗೆ ಸಾರ್ವಜನಿಕರ ತೀವ್ರ ಆಕ್ಷೇಪ ಕೇಳಿಬಂದಿದ್ದರಿಂದ ಟಿಕಾಯತ್‌ ಈ ಹೇಳಿಕೆ ನೀಡಿದರು.

ಮಾತುಕತೆಗೆ ಬನ್ನಿ
ಪ್ರತಿಭಟನೆ, ಬಂದ್‌ ಅನ್ನು ಬಿಟ್ಟು ಮಾತುಕತೆಗೆ ಬರುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ಥೋಮರ್‌ ರೈತ ನಾಯಕರಿಗೆ ಕರೆ ನೀಡಿದ್ದಾರೆ. ನಾವು ಮೊದಲಿನಿಂದಲೂ ಮಾತುಕತೆಗೆ ಸಿದ್ಧರಿದ್ದೇವೆ. ನೀವು ಹಠ ಬಿಟ್ಟು ಬನ್ನಿ ಎಂದು ಹೇಳಿದ್ದಾರೆ. ದೇಶಾದ್ಯಂತ ಬಂದ್‌ ಶುರುವಾಗುವ ಮುನ್ನವೇ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next