ನವದೆಹಲಿ: ಕೇಂದ್ರ ಸರ್ಕಾರದ ಆರ್ಥಿಕ ನೀತಿ, ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ರಾಷ್ಟ್ರವ್ಯಾಪಿ ಬಂದ್ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಆರೋಪ, ಪ್ರತ್ಯಾರೋಪ ತಾರಕಕ್ಕೇರಿದೆ.
ತೈಲ ಉತ್ಪಾದನಾ ರಾಷ್ಟ್ರಗಳ ಮೇಲೆ ಕೇಂದ್ರ ಸರ್ಕಾರದ ಹಿಡಿತ ಇರುವುದಿಲ್ಲ. ಹೀಗಾಗಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ನಮ್ಮ ಕೈಯಲ್ಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸಮಜಾಯಿಷಿ ನೀಡಿದ್ದಾರೆ. ಪೆಟ್ರೋಲ್ ದರ ಇಳಿಕೆ ಅಧೀಕಾರ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಹೇಳಿದರು.
ದೇಶದಲ್ಲಿನ ಪ್ರಸಕ್ತ ಆರ್ಥಿಕ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಮಾತ್ರ ಹೊಣೆ ಎಂಬಂತೆ ವಿಪಕ್ಷಗಳು ಬಿಂಬಿಸುತ್ತಿವೆ. ನಾವು ಈ ದೇಶದ ಜನತೆ ಜೊತೆಗಿದ್ದೇವೆ. ಅಷ್ಟೇ ಅಲ್ಲ ಈ ಸಮಸ್ಯೆ ಬಗೆಹರಿಸಿಲು ನಾವು ಯತ್ನಿಸುತ್ತಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ತೈಲ ಬೆಲೆ ಏರಿಕೆ ನಿಯಂತ್ರಣ ಭಾರತ ಸರ್ಕಾರದ ಕೈಯಲ್ಲಿ ಇಲ್ಲ..ಇದು ಆಂತರಿಕ ವಿಚಾರವಲ್ಲ. ಅತೀಯಾದ ತೈಲ ಬೇಡಿಕೆಯಿಂದಾಗಿ ಈ ದರ ಏರಿಕೆಯಾಗಿದೆ ಎಂದು ಹೇಳಿದರು.
ಬಂದ್ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಜನಜೀವನವನ್ನು ಅಲುಗಾಡಿಸಿದ್ದಾರೆ. ಹಿಂಸೆಯ ಮೂಲಕ ಬಂದ್ ನಡೆಸಿ ಭಯದ ವಾತಾವರಣ ಹುಟ್ಟುಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಪ್ರತಿಭಟಿಸಲು ಎಲ್ಲರಿಗೂ ಹಕ್ಕಿದೆ. ಆದರೆ ಇಂದು ಏನು ನಡೆಯಿತು? ಪೆಟ್ರೋಲ್ ಬಂಕ್, ಬಸ್ ಗಳಿಗೆ ಬೆಂಕಿ ಹಚ್ಚಿದರು. ಜನರ ಜೀವದ ಜೊತೆ ಚೆಲ್ಲಾಟವಾಡಿದರು..ಇದಕ್ಕೆಲ್ಲಾ ಯಾರು ಹೊಣೆ ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದರು.