ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಲಕ್ಷ್ಮೀಸಾಗರ ಗೇಟ್ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಟ್ಟಿ ಐದಾರು ವರ್ಷಗಳೇ ಕಳೆದರೂ ಆಸ್ಪತ್ರೆ ಕಟ್ಟಡ ಸುರಕ್ಷತೆ ಹಿನ್ನೆಲೆಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಗಿಲ್ಲ.
ಆರ್‌ಐಡಿಎಫ್‌ನ 15ನೇ ಅನುದಾನದ ಯೋಜನೆಯಡಿ ಬರೋಬ್ಬರಿ 55 ಲಕ್ಷ ವೆಚ್ಚದಲ್ಲಿ ಇಲ್ಲಿನ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಸಜ್ಜಿತ ಕಟ್ಟಡವನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರದ ವತಿಯಿಂದ ಕಟ್ಟಲಾಗಿದೆ. ನಿತ್ಯ ಇಲ್ಲಿನ ಆಸ್ಪತ್ರೆಯ ಸೇವೆಗಳನ್ನು ಬಯಸಿ ಸುತ್ತಮುತ್ತಲಿನ ಲಕ್ಷ್ಮೀಸಾಗರ, ಐನಹಳ್ಳಿ, ಬ್ಯಾಲಾಳು, ಯಳಗೋಡು ಸೇರಿದಂತೆ ನಾನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳ ಜನರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇಲ್ಲಿನ ಕಟ್ಟಡದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಆಸ್ಪತ್ರೆ ಪರಿಕರಗಳನ್ನು ಹೊತ್ತೂಯ್ದು ಆಸ್ಪತ್ರೆ ಕಟ್ಟಡದ ಕೆಲ ಭಾಗಗಳಿಗೆ ಹಾನಿ ಮಾಡಿದ್ದ ಪ್ರಕರಣ ನಡೆದಿತ್ತು. ಈ ಕುರಿತು ಅಂದಿನ ಟಿಎಚ್‌ಒ ಆಗಿದ್ದ ಈಗ ಡಿಎಚ್‌ಒ ಆಗಿರುವ ಡಾ.ಪಾಲಾಕ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಆ ಬಳಿಕ ಆಸ್ಪತ್ರೆ ಕಟ್ಟಡದ ಮುಂದಿನ ಮತ್ತು ಹಿಂದಿನ ಬಾಗಿಲುಗಳಿಗೆ ಕಬ್ಬಿಣದ ಗೇಟ್ ಗಳನ್ನು ಗ್ರಾಮ ಪಂಚಾಯತ್ ಅನುದಾನದಲ್ಲಿ ನಿರ್ಮಿಸಿಕೊಡಲಾಗಿತ್ತು. ಆಸ್ಪತ್ರೆ ಬಳಿ 108 ಅಂಬ್ಯುಲೆನ್ಸ್ ವಾಹನ ಕೂಡ ರಾತ್ರಿ ವೇಳೆ ನಿಲುಗಡೆ ಮಾಡಲಾಗುತ್ತಿದೆ. ಹೇಳಿಕೇಳಿ ಹೈವೇ ರಸ್ತೆಗೆ ಹೊಂದಿಕೊಂಡಿರುವ ಈ ಆಸ್ಪತ್ರೆ ಆವರಣದಲ್ಲಿ ಹೈವೇ ದಾರಿಹೋಕ ಬುದ್ಧಿ ಮಾಂದ್ಯರು ಸೇರಿದಂತೆ ಇತರರು ಇಲ್ಲಿ ರಾತ್ರಿ ವೇಳೆ ತಂಗುವುದು ಇದೆ. ಅಲ್ಲದೆ ಕೆಲ ಪುಡಾರಿಗಳು ಇಲ್ಲಿನ ಸ್ಥಳದಲ್ಲಿ ಮದ್ಯ ಸೇವಿಸಿ, ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿಯುವದರಿಂದ ಆಸ್ಪತ್ರೆ ಆವರಣದಲ್ಲಿ ಗಲೀಜು ಸೃಷ್ಟಿಯಾಗುತ್ತಿದೆ. ಆಸ್ಪತ್ರೆ ಕಟ್ಟಡ ರಜೆ ದಿನಗಳಲ್ಲಿ ಹೈವೇ ದಾರಿಹೋಕರ ತಂಗುದಾಣವಾಗಿ ಬಿಟ್ಟಿದೆ.
ಅಲ್ಲದೆ ಆವರಣದಲ್ಲಿ ದನಕರುಗಳು ಬರುವುದರಿಂದ ಗಿಡಗಳ ಉಳಿವಿಗೆ ತೊಂದರೆ ಆಗುತ್ತಿದೆ. ಪಲ್ಸ್ ಪೋಲೀಯೋ ಇತರೆ ರಾಷ್ಟ್ರೀಯ ಕಾರ್ಯಕ್ರಮಗಳ ವೇಳೆ ಆಸ್ಪತ್ರೆಗೆ ಮುಂಜಾನೆಗೆ ಆಗಮಿಸಬೇಕಾದ ಆರೋಗ್ಯ ಸಿಬ್ಬಂದಿಗೆ ಇಲ್ಲಿನ ಆಸ್ಪತ್ರೆ ಆವರಣಕ್ಕೆ ಬರಲು ಭಯ ಕಾಡುತ್ತದೆ. ಆಸ್ಪತ್ರೆ ಕಟ್ಟಡಕ್ಕೆ ಸುಸಜ್ಜಿತ ಕಾಂಪೌಂಡ್ ಗೋಡೆ ನಿರ್ಮಿಸುವ ಕುರಿತು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲೂ ಚರ್ಚೆ ಆಗಿದೆ. ಈ ಬಗ್ಗೆ ಅನುದಾನ ನೀಡುವಂತೆ ಗ್ರಾಪಂನಿಂದ ಜಿಲ್ಲಾ ಪಂಚಾಯತ್ ಅನುದಾನಕ್ಕೆ ಬೇಡಿಕೆ ಕೂಡ ಸಲ್ಲಿಸಲಾಗಿದೆ. ಷಟ³ಥ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಆಸ್ಪತ್ರೆ ಸನಿಹದಲ್ಲೇ ನಡೆಯುತ್ತಿದೆ. ಹೈವೇ ಕಾಮಗಾರಿ ಬಳಿಕ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಹಿಂದೆ ಆಸ್ಪತ್ರೆ ಕಟ್ಟಡದ ಸುತ್ತ ಕಾಂಪೌಂಡ್ ನಿರ್ಮಾಣಕ್ಕಾಗಿ ಗ್ರಾಪಂಗೆ ಮನವಿ ಸಲ್ಲಿಸಲಾಗಿತ್ತು. ಹೈವೇ ರಸ್ತೆ ಕಾಮಗಾರಿ ಮುಗಿದ ಬಳಿಕ ಕಾಂಪೌಂಡ್ ನಿರ್ಮಿಸಿಕೊಡುತ್ತೇವೆ ಎಂಬುದಾಗಿ ತಾಪಂ ಸದಸ್ಯರು ತಿಳಿಸಿದ್ದಾರೆ. ಒಮ್ಮೆ ಆಸ್ಪತ್ರೆಯಲ್ಲಿ ಕಳ್ಳತನ ಆದಾಗ ಕಟ್ಟಡದ ಬಾಗಿಲುಗಳಿಗೆ ಕಬ್ಬಿಣದ ಬಾಗಿಲುಗಳನ್ನು ಗ್ರಾಪಂನವರು ನಿರ್ಮಿಸಿಕೊಟ್ಟಿದ್ದರು.
ಡಾ.ಜಯಶ್ರೀ,
ವೈದ್ಯಾಧಿಕಾರಿಗಳು, ಲಕ್ಷ್ಮೀಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ.
ಎಚ್.ಬಿ.ನಿರಂಜನ ಮೂರ್ತಿ