ಭರಮಸಾಗರ: ಇಲ್ಲಿನ ಮುಖ್ಯ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಸುಮಾರು ಲಕ್ಷಗಳ ವೆಚ್ಚದಲ್ಲಿ ಕಟ್ಟಲಾಗಿದ್ದ ಖಾಸಗಿ ಬಸ್ ನಿಲ್ದಾಣ ಕಟ್ಟಡವನ್ನು ನೆಲಸಮ ಮಾಡಿದ್ದರಿಂದ ಬೇರೆ ಊರುಗಳಿಗೆ ಸಂಚರಿಸುವ ಪ್ರಯಾಣಿಕರು ಬಿಸಿಲು, ಗಾಳಿ, ಮಳೆ, ಧೂಳು ಎನ್ನದೆ ರಸ್ತೆಯಲ್ಲಿ ನಿಲ್ಲಬೇಕಾಗಿದೆ.
ಇಲ್ಲಿನ ಮುಖ್ಯ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರವೇ ನಿರ್ವಹಿಸುತ್ತಿತ್ತು. ಬಹಳಷ್ಟು ವರ್ಷಗಳ ಕಾಲ ಒಂದು ನಿಲ್ದಾಣವೇ ಇಲ್ಲದೆ ಜನರು ತೊಂದರೆಪಡುತ್ತಿದ್ದರು. ಸುಮಾರು 15 ವರ್ಷಗಳ ಹಿಂದೆ ಗ್ರಾಮದ ಮುಖ್ಯ ರಸ್ತೆ ಬೇರ್ಪಡಿಸಿ ಬೈಪಾಸ್ ರಸ್ತೆ ನಿರ್ಮಿಸಲಾಯಿತು.
ಬಳಿಕ ಬಹು ದಿನಗಳ ಜನರ ಬೇಡಿಕೆ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳ ಹಿಂದೆ ಎರಡು ವಾಣಿಜ್ಯ ಮಳಿಗೆ ಸೇರಿದಂತೆ ಜನರು ಕುಳಿತುಕೊಳ್ಳಲು ಅನುಕೂಲವಾಗುವ ರೀತಿ ಖಾಸಗಿ ಬಸ್ ನಿಲ್ದಾಣವನ್ನು ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ನಿರ್ಮಾಣ ಮಾಡಲಾಗಿತ್ತು.
ಇದೀಗ ಬೈಪಾಸ್ ಟು ಬೈಪಾಸ್ ಸಂಪರ್ಕಿಸುವ ಇಲ್ಲಿನ ಮುಖ್ಯ ರಸ್ತೆ ಅಭಿವೃದ್ಧಿಗಾಗಿ 100 ವರ್ಷಗಳ ಹಳೆಯದಾದ ಸುಮಾರು 30ಕ್ಕೂ ಹೆಚ್ಚು ಮರಗಳನ್ನು ಈಗಾಗಲೇ ಕಡಿಯಲಾಗಿದೆ. ಇದರಿಂದ ಮರಗಳ ನೆರಳಿನಡಿ ನಿಂತು ವಿಶ್ರಾಂತಿ ಪಡೆಯುತ್ತಿದ್ದ ದಾರಿ ಹೋಕರು ಮತ್ತು ಪ್ರಯಾಣಿಕರ ಅನುಕೂಲ ಕೂಡ ಕೈ ತಪ್ಪಿದೆ. ಈ ನಡುವೆ ರಸ್ತೆ ನಿರ್ಮಾಣಕ್ಕೆ ಅಡ್ಡಲಾದ ಕೆಲವೇ ವರ್ಷಗಳ ಹಿಂದೆ ಕಟ್ಟಲಾದ ಖಾಸಗಿ ಬಸ್ ನಿಲ್ದಾಣವನ್ನು ನೆಲಸಮ ಮಾಡಲಾಗಿದೆ. ಇದರಿಂದ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ನಾನಾ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಕಟ್ಟಡ ನೆಲಸಮ ಮಾಡಿದ ಸ್ಥಳದಲ್ಲಿ ನೆರಳಿಲ್ಲದೆ ಜನರು ಬಿಸಿಲು, ಗಾಳಿ, ಮಳೆ, ಧೂಳಿನ ಮಧ್ಯೆ ಬರುವ ಬಸ್‌ಗಳಿಗಾಗಿ ಕಾಯ್ದು ನಿಲ್ಲಬೇಕಾಗಿದೆ.
ನೆರಳು ಬೇಕೆಂದರೆ ಸುಮಾರು 200 ಮೀಟರ್ ದೂರದ ವಾಣಿಜ್ಯ ಮಳಿಗೆಗಳು ಇಲ್ಲವೆ ಬಂಕ್ ಗಳ ಬಳಿಗೆ ತೆರಳಬೇಕು. ವೃದ್ಧರು, ರೋಗಿಗಳು, ಮಹಿಳೆಯರು ಎನ್ನದೆ ಎಲ್ಲರೂ ನಿಂತಲ್ಲೆ ನಿಲ್ಲಬೇಕಾದ ಸಮಸ್ಯೆಯಿದೆ. ಇನ್ನೂ ಕುಡಿಯುವ ನೀರು, ಶೌಚಾಲಯ ಇತರೆ ಅನುಕೂಲಗಳನ್ನು ಈ ಸ್ಥಳದಲ್ಲಿ ಕೇಳಿದರೆ ತಪ್ಪಾಗುತ್ತದೆ. ನಿತ್ಯ 5-6 ಸಾವಿರ ಪ್ರಯಾಣಿಕರು ಇಲ್ಲಿನ ಬಸ್ ನಿಲ್ದಾಣದ ಸ್ಥಳಕ್ಕೆ ಬಂದು ಹೋಗುವುದರಿಂದ ಎಲ್ಲರಿಗೂ ಸಮಸ್ಯೆ ಉಂಟಾಗುತ್ತಿದೆ ಎನ್ನುತ್ತಾರೆ ಪ್ರಯಾಣಿಕ ಹನುಮಂತಪ್ಪ.