ಭರಮಸಾಗರ: ಇಲ್ಲಿನ ಬೈಪಾಸ್‌ನಲ್ಲಿ ಭರಮಸಾಗರ-ಗೊಲ್ಲರಹಟ್ಟಿ ಬಳಿ ಚಿತ್ರದುರ್ಗದ ಕಡೆಯಿಂದ ಗ್ರಾಮವನ್ನು ಪ್ರವೇಶಿಸುವ ಕೆಳಸೇತುವೆ ಬಳಿ ತುರ್ತು ಸಮಯದಲ್ಲಿ ಸೇತುವೆ ಮೇಲ್ಭಾಗಕ್ಕೆ ತೆರಳಲು ಮೆಟ್ಟಿಲುಗಳ ವ್ಯವಸ್ಥೆ ಇಲ್ಲ. ಹಾಗಾಗಿ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ.
ಇಲ್ಲಿನ ಕೆಳಸೇತುವೆಯಿಂದ ರಸ್ತೆಯನ್ನು ಎತ್ತರಿಸಿ ಇಳಿಜಾರು ಕೊನೆಗೊಂಡಿರುವ ಎರಡು ಕಡೆ ಸುಮಾರು ಒಂದು ಕಿಮೀ ದೂರದವರೆಗೆ ಚಲಿಸಲು ಪ್ರಯಾಸಪಡಬೇಕಿದೆ. ವಾಹನ ಸೌಲಭ್ಯ ಉಳ್ಳವರಿಗೆ ತೊಂದರೆಯಿಲ್ಲ. ಅನುಕೂಲಸ್ಥರು ಆಟೋ ಮೂಲಕ ಇಲ್ಲಿಂದ ಸುರಕ್ಷಿತವಾಗಿ ಮನೆ ಸೇರುತ್ತಾರೆ. ಆದರೆ ಬಡವರು ಮಾತ್ರ ಮೆಟ್ಟಿಲುಗಳಿಲ್ಲದ ಕೆಳಸೇತುವೆಯಿಂದ ಕೆಳಗೆ ಇಳಿಯಲು ಆಗದೆ ಕೊಂಕಣ ಸುತ್ತಿ ಮೈಲಾರ ತಲುಪಿದಂತೆ ದೂರದ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿದೆ.
ಕೆಳಸೇತುವೆ ಬಳಿ ಮೆಟ್ಟಿಲುಗಳ ವ್ಯವಸ್ಥೆ ಇಲ್ಲದೇ ಇರುವುದರಿಂದ ಹೈವೇ ತಲುಪಲು ಕೆಳಸೇತುವೆಯಿಂದ ಎರಡು ಬದಿಯಲ್ಲಿ ಸುಮಾರು ಒಂದು ಕಿಮೀ ದೂರದವರೆಗೆ ಸಾಗಬೇಕು. ರಾತ್ರಿ ವೇಳೆ ಕೆಎಸ್ ಆರ್‌ಟಿಸಿ ಹಾಗೂ ಇತರೆ ಬಸ್‌ಗಳು ಗ್ರಾಮದ ಒಳಗೆ ಬಾರದೆ ಬೈಪಾಸ್‌ನಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುವುದು ಸಾಮಾನ್ಯವಾಗಿದೆ. ಮೆಟ್ಟಿಲುಗಳಿಲ್ಲದ ಕೆಳಸೇತುವೆಯಲ್ಲಿ ಜನರು ರಾತ್ರಿ ವೇಳೆ ಬೈಪಾಸ್‌ನಲ್ಲಿ ಬಸ್ ಇಳಿದರೆ ಕೆಳಸೇತುವೆಯಿಂದ ಎತ್ತರಿಸಿ ಇಳಿಜಾರು ಮಾಡಲಾಗಿರುವ ಸ್ಥಳದಲ್ಲಿ ಸುಮಾರು ಒಂದು ಕಿಮೀ ದೂರ ಇಳಿಯಬೇಕು. ಇದರಿಂದ ರೋಗಿಗಳು, ವೃದ್ಧರು ಎಂಬ ಭೇದವಿಲ್ಲದೆ ಕತ್ತಲೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಮನೆ ಸೇರಬೇಕಾದ ಸ್ಥಿತಿ ಇದೆ.
ಕೆಳಸೇತುವೆ ಉದ್ದಕ್ಕೂ ಇರುವ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಗಾಯಾಳುಗಳನ್ನು ಸಾಗಿಸಲು ಸುಮಾರು ಒಂದೆರಡು ಕಿಮೀ ದೂರದ ರಸ್ತೆಯನ್ನು ಸುತ್ತು ಹಾಕಬೇಕು. ಇದರಿಂದ ಸಮಯ ವಿಳಂಬತೆಯ ಸಮಸ್ಯೆಯನ್ನೂ ಎದುರಿಸಬೇಕಿದೆ. ಕೆಳಸೇತುವೆ ಬಳಿ ಮೆಟ್ಟಿಲುಗಳ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುವುದರಿಂದ ಮೆಟ್ಟಿಲುಗಳ ಸೌಲಭ್ಯವನ್ನು ಹೈವೇ ಪ್ರಾಧಿಕಾರ ಒದಗಿಸಬೇಕು ಎಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಾಯ.