ಭರಮಸಾಗರ: ಕೋಣನೂರು ಗ್ರಾಮದ ಮುಖ್ಯ ರಸ್ತೆಯ ಎಸ್‌ಸಿ ಕಾಲೋನಿಗೆ ತೆರಳುವ ಮುಖ್ಯ ದ್ವಾರದಲ್ಲಿ ಚರಂಡಿ ಇಲ್ಲದಿರುವ ಕಾರಣ ಹೊಲಸು ನೀರು ರಸ್ತೆ ಮೇಲೆ ಹರಿದು ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ.
ಇಲ್ಲಿನ ಎಸ್‌ಸಿ ಕಾಲೋನಿ ಮುಖ್ಯ ರಸ್ತೆಯ ಬಳಿ ರಸ್ತೆ ಸೇತುವೆ ಅಥವಾ ಡೆಕ್ ನಿರ್ಮಿಸುವಂತೆ ದೊಡ್ಡಾಲಘಟ್ಟ ಗ್ರಾಮ ಪಂಚಾಯತ್‌ಗೆ ಕಳೆದ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೆ ಗ್ರಾಪಂನವರು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ರಸ್ತೆ ಬಳಿಯ ಚರಂಡಿ ನೀರಿನಿಂದ ಡಾಂಬರ್ ರಸ್ತೆ ಹಾಳಾಗಿದೆ. ಈಗಾಗಲೇ ಕಿತ್ತು ಹೋದ ಡಾಂಬರ್ ರಸ್ತೆಗೆ ತೇಪೆ ಹಾಕಲಾಗಿದೆ. ಅಲ್ಲದೆ ಚರಂಡಿ ನೀರಿನ ದುರ್ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಸೊಳ್ಳೆ, ಇತರೆ ಕ್ರಿಮಿ ಕೀಟಗಳಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಇತರರು ಅಕಸ್ಮಾತ್ ರಾತ್ರಿ ವೇಳೆ ಇಲ್ಲಿನ ಎಚ್ಚರ ತಪ್ಪಿದರೆ ಅನಾಹುತ ನಿಶ್ಚಿತ. ಬೇಸಿಗೆ, ಚಳಿಗಾಲದಲ್ಲಿ ಚರಂಡಿ ನೀರು ಮಳೆಗಾಲದಲ್ಲಿ ಮಳೆ ನೀರಿನಿಂದ ಸದಾ ಕೊಳಚೆಯಾಗಿದ್ದು, ಅನೈರ್ಮಲ್ಯ ಸೃಷ್ಟಿಯಾಗುತ್ತದೆ.
ಈ ಸ್ಥಳದಲ್ಲಿ ಸಾಂಕ್ರಾಮಿಕ ರೋಗಗಳ ಆವಾಸ ಸ್ಥಳವಾಗದಂತೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯತ್‌ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರೇ ಈ ಸ್ಥಳದಲ್ಲಿ ಡೆಕ್ ನಿರ್ಮಿಸುವಂತೆ ಗ್ರಾಮ ಪಂಚಾಯತ್‌ಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂಬುದು ಕೋಣನೂರು ಗ್ರಾಮಸ್ಥರ ಬೇಸರ.
ಇನ್ನದರೂ ದೊಡ್ಡಾಲಘಟ್ಟ ಗ್ರಾಮ ಪಂಚಾಯತ್ ದವರು ಎಚ್ಚೆತ್ತುಕೊಂಡು ಡೆಕ್ ನಿರ್ಮಾಣ ಮಾಡಿ ಕೊಳಚೆ ನೀರಿನ ಸಮಸ್ಯೆಯನ್ನು ನಿವಾರಿಸಲು ಮುಂದಾಗಬೇಕಿದೆ.