Advertisement

ಮರಳುಗಾರಿಕೆಯಿಂದ ಕೆರೆ ಒಡಲು ಬರಿದು

01:35 PM Mar 05, 2020 | Naveen |

ಭರಮಸಾಗರ: ಇಲ್ಲಿನ ಐತಿಹಾಸಿಕ ದೊಡ್ಡಕೆರೆಯಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದಾಗಿ ಕೆರೆಯ ಒಡಲು ಬರಿದಾಗಿದೆ.

Advertisement

ಭರಮಣ್ಣ ನಾಯಕ ಕಟ್ಟಿಸಿದ ಐತಿಹಾಸಿಕ ದೊಡ್ಡಕೆರೆ 800 ಎಕರೆಯಷ್ಟು ವಿಸ್ತಾರವಾಗಿದೆ. ಕೆರೆಯಿಂದ ರೈತರು ಪಡೆದಿರುವ ಅನುಕೂಲಗಳಿಗಿಂತ ಅಕ್ರಮ ಮರಳುಗಾರಿಕೆ ಹೆಚ್ಚು ಸದ್ದು ಮಾಡಿದೆ. ಕಳೆದ ಕೆಲ ವರ್ಷಗಳಿಂದ ಕೆರೆಯಲ್ಲಿ ಮರಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳುಗಾರಿಕೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡಿದೆ.

ಅಕ್ರಮವನ್ನು ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆಗಳಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಅವರ ಕೈ ಕಟ್ಟಲಾಗಿದೆ. ಹೀಗೆ ಮರಳುಗಾರಿಕೆ ತಡೆಯುವ ಎಲ್ಲಾ ಪ್ರಯತ್ನಗಳನ್ನು ಒಂದೊಂದಾಗಿ ಶಮನ ಮಾಡಿಕೊಂಡು ಮರಳುಗಾರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಕೆರೆ ವ್ಯಾಪ್ತಿಯಲ್ಲಿ ಸುಮಾರು 40 ಅಡಿಗಳ ಆಳದವರೆಗೆ ಗುಂಡಿಗಳನ್ನು ತೆಗೆದು ಗುಣಮಟ್ಟದ ಮರಳನ್ನು ಟ್ರ್ಯಾಕ್ಟರ್‌ಗಳ ಮೂಲಕ ನಿತ್ಯ ಸಾಗಾಟ ಮಾಡಲಾಗುತ್ತಿದೆ. ಹೆಚ್ಚು ಕೂಲಿ ಸಿಗುವುದರಿಂದ ಕೆಲಕಾರ್ಮಿಕರು ಕೂಡ ಇದರಲ್ಲಿ  ತೊಡಗಿಸಿಕೊಂಡಿದ್ದಾರೆ.

ಕೆರೆಯ ಒಂದು ಭಾಗದಲ್ಲಿನ ದೊಡ್ಡ ಗುಂಡಿಗಳನ್ನು ನೋಡಿದರೆ ಇದು ಕೆರೆಯೋ ಅಥವಾ ಮರಳು ಯಾರ್ಡೋ  ಎನ್ನುವಷ್ಟರ ಮಟ್ಟಿಗೆ ಗುಂಡಿಗಳು ರಾರಾಜಿಸುತ್ತಿವೆ. ಟ್ರ್ಯಾಕ್ಟರ್‌ ಮರಳಿಗೆ 4 ರಿಂದ 5 ಸಾವಿರ ರೂ. ಬೆಲೆಯಿದೆ. ಚಿತ್ರದುರ್ಗ ನಗರ ಸೇರಿದಂತೆ ಭರಮಸಾಗರದ ದೊಡ್ಡಕೆರೆಯ ಮರಳು ಜಗಳೂರು, ದಾವಣಗೆರೆ ತಾಲೂಕಿನ ಹಳ್ಳಿಗಳಿಗೆ ಸಾಗಾಟವಾಗುತ್ತದೆ. ಪೊಲೀಸರು ಆಗೊಮ್ಮೆ ಈಗೊಮ್ಮೆ ಒಂದೋ ಎರಡೋ ಟ್ರ್ಯಾಕ್ಟರ್‌ಗಳನ್ನು ಹಿಡಿಯುತ್ತಾರಾದರೂ ಅದ್ಯಾವುದನ್ನೂ ಲೆಕ್ಕಿಸದೆ ಮರಳು ಸಾಗಾಟ ನಡೆದೇ ಇರುತ್ತದೆ. ಎಷ್ಟೋ ಟ್ರಾಕ್ಟರ್‌ಗಳು ಈ ಧಂದೆ ಹಿನ್ನೆಲೆಯಲ್ಲಿ ಭರಮಸಾಗರ ಸುತ್ತಮುತ್ತಲ ಪ್ರದೇಶಗಳಲ್ಲಿ ನೋಂದಣಿ ಆಗುವುದಿಲ್ಲ.

ಅಕಸ್ಮಾತ್‌ ಪೊಲೀಸರು ಟ್ರ್ಯಾಕ್ಟರ್‌ ಹಿಡಿದರೆ ಹಿಡಿಯಲಿ ಎನ್ನುವ ಸಾಗಾಟ ನಡೆಸುವವರು, ಅದನ್ನು ಕೈಬಿಟ್ಟು ಹೊಸ ಟ್ರ್ಯಾಕ್ಟರ್‌ ಖರೀದಿಸಿ ಮರಳು ಸಾಗಾಟ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಕಂದಾಯ ಭೂಮಿಗಳಿಂದಲೂ ಮರಳು ಸಾಗಾಟ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕೆಲ ಇಲಾಖೆ ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ಕುರುಡರಂತೆ ವರ್ತಿಸುತ್ತಿರುವುದು ಜನಸಾಮಾನ್ಯರಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Advertisement

ಕೆಲವು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳನ್ನು ಪೊಲೀಸ್‌ ಹಾಗೂ ಇತರೆ ಇಲಾಖೆಗಳ ಪರ್ಮಿಟ್‌ ಪಡೆದವರಂತೆ ರಾಜಾರೋಷವಾಗಿ ರಾತ್ರಿ ವೇಳೆ ಸಾಗಾಟ ನಡೆಸುತ್ತಾರೆ. ದೊಡ್ಡ ಕೆರೆ ಗಡಿ ಗುರುತಿಸಿ ಕೆರೆ ಸುತ್ತ ಸುಮಾರು 10 ಅಡಿಗಳವರೆಗೆ ಕಲ್ಲು ಕಟ್ಟಡ ಕಟ್ಟಲಾಗಿದೆ. ಆದರೆ ಕೆರೆಯ ಹೆಗಡೆಹಾಳು ಮತ್ತು ಭರಮಸಾಗರ ಗೊಲ್ಲರಹಟ್ಟಿಗಳ ಕಡೆ ಮಾತ್ರ ಎರಡು ಕಡೆ ಕೆರೆಗೆ ಪ್ರವೇಶ ನೀಡಲಾಗಿದೆ. ಈ ಎರಡು ರಸ್ತೆಗಳೇ ಅಕ್ರಮ ಮರಳು ಸಾಗಾಟಕ್ಕೆ ಇದೀಗ ರಹದಾರಿಗಳಾಗಿವೆ. ಕಳೆದ ಕೆಲ ವರ್ಷಗಳಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಬತ್ತಲು ಕೆರೆ ವ್ಯಾಪ್ತಿಯ ಅಕ್ರಮ ಮರಳುಗಾರಿಕೆ ಕಾರಣ ಎಂಬ ಮಾತುಗಳು ರೈತಾಪಿ ವಲಯದಿಂದ ಕೇಳಿ ಬಂದಿವೆ.

ಇಟ್ಟಿಗೆ ಭಟ್ಟಿ ಮಣ್ಣಿಗೂ ಅಕ್ಷಯ ಪಾತ್ರೆ!
ದೊಡ್ಡಕೆರೆ ಅಕ್ರಮ ಮರಳಿಗೆ ಮಾತ್ರವಲ್ಲದೆ ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳನ್ನು ನಡೆಸುವವರಿಗೂ ಸುಲಭವಾಗಿ ಮಣ್ಣನ್ನು ಪೂರೈಸುವ ಅಕ್ಷಯಪಾತ್ರಯಾಗಿದೆ. ಪ್ರತಿ ವರ್ಷ ಸಾವಿರಾರು ಲೋಡ್‌ ಮಣ್ಣು ಇಟ್ಟಿಗೆ ಭಟ್ಟಿಗಳಿಗೆ ಇಲ್ಲಿನ ಕೆರೆಯಿಂದಲೇ ಸಾಗಾಟವಾಗುತ್ತದೆ. ಖಾಲಿ ಕೆರೆಯ ಮೈದಾನದಲ್ಲಿ ಅಕಸ್ಮಾತ್‌ ದನಕರುಗಳು ಮೇಯಲು ಹೋದರೆ ಅಕ್ರಮದ ಗುಂಡಿಗಳಲ್ಲಿ ಬಿದ್ದು ಸತ್ತೆ ಹೋಗುತ್ತವೆ. ದನ ಕರುಗಳು, ಪಶು ಪಕ್ಷಿಗಳ ಸ್ವತ್ಛಂದ ಇರುವಿಕೆಗೂ, ಬದುಕಿಗೂ ಕೊಳ್ಳಿ ಇಟ್ಟಿರುವ ಇಲ್ಲಿನ ಅಕ್ರಮ ಮರಳುಗಾರಿಕೆ, ಸ್ಥಳೀಯ ಜನರ ಅದೆಷ್ಟೋ ರಾತ್ರಿಗಳ ನಿದ್ದೆಗೂ ಭಂಗ ಉಂಟು ಮಾಡುತ್ತಿದೆ. ಇಂದಿರಾ ಕಾಲೋನಿ, ಹೆಗಡೆಹಾಳು ಇತರೆ ಪ್ರದೇಶಗಳಿಂದ ರಾತ್ರಿಯೆಲ್ಲಾ ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳ ಶಬ್ದ ಜನರ ನಿದ್ದೆಯನ್ನೇ ಕಸಿದುಕೊಂಡಿದೆ.

ಎಚ್‌.ಬಿ.ನಿರಂಜನ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next