ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ಕಳೆದ ತಿಂಗಳು ಎಡೆಬಿಡದೆ ಸುರಿದ ಮಳೆಯಿಂದ ತೆನೆಗಟ್ಟಿದ ರಾಗಿ ಫಸಲಿಗೆ ಕಂಟಕ ಎದುರಾಗಿತ್ತು. ಇದೀಗ ಕಟಾವಿಗೆ ಬಂದಿರುವ ರಾಗಿ ಕೊಯ್ಲಿಗೆ ರೈತರಿಗೆ ದುಬಾರಿ ಕೂಲಿ ದರದ ಸಮಸ್ಯೆ ಎದುರಾಗಿದೆ.
ಚಿತ್ರದುರ್ಗ ತಾಲೂಕಿನಲ್ಲಿ ರಾಗಿ ಬಿತ್ತನೆ ಪ್ರದೇಶದ ಹೋಬಳಿವಾರು ವಿವರ ಇಂತಿದೆ. ಕಸಬಾ-1650 ಹೆಕ್ಟೇರ್, ಭರಮಸಾಗರ- 1260 ಹೆಕ್ಟೇರ್, ಹಿರೇಗುಂಟನೂರು- 620 ಹೆಕ್ಟೇರ್, ತುರುವನೂರು-1025 ಹೆಕ್ಟೇರ್ ಸೇರಿದಂತೆ 4555 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ.
ಸಿರಿಧಾನ್ಯ ಬೆಳೆಯಾಗಿರುವ ರಾಗಿಯನ್ನು ಕಳೆದ ವರ್ಷ ಸರ್ಕಾರ ಬೆಂಬಲ ಬೆಲೆಯಡಿ ಎಪಿಎಂಸಿ ಮಾರುಕಟ್ಟೆ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಿತ್ತು. ಒಂದು ಎಕರೆ ರಾಗಿ ಫಸಲು ಕೊಯ್ಲಿಗೆ 8 ರಿಂದ 10 ಸಾವಿರ ರೂ.ಗಳನ್ನು ಗುತ್ತಿಗೆ ನೀಡಿ ಕೊಯ್ಲು ಮಾಡಿಸಬೇಕು. ಇಲ್ಲವೇ ಬೆಳಿಗ್ಗೆ 10 ಗಂಟೆಗೆ ಬಂದು ಸಂಜೆ 5ಕ್ಕೆ ಕೆಲಸ ಮುಗಿಸುವ ಕೂಲಿಕಾರರಿಗೆ 400 ರೂ. ನೀಡಬೇಕು. ಹೀಗಾಗಿ ಹಲವು ರೈತರು ದುಬಾರಿ ದರದ ರಾಗಿ ಕೊಯ್ಲಿನ ಸಮಸ್ಯೆಯಿಂದ ರಾಗಿ ಬಿತ್ತನೆಯಿಂದ ಹಿಂದೆ ಸರಿದಿದ್ದೂ ಇದೆ. ಪ್ರಸಕ್ತ ವರ್ಷ ಮಳೆ ತಡವಾಗಿ ಶುರುವಾಯಿತು. ಇದರಿಂದ ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿದು ಕೊನೆಯ ಆಟ ಎಂಬಂತೆ ರಾಗಿ ಬಿತ್ತನೆ ಬಿಟ್ಟರೆ ಬೇರೆ ಬೆಳೆಗಳನ್ನು ಬೆಳೆಯಲು ಅವಕಾಶವಿಲ್ಲ.
ಹಾಗಾಗಿ ಅನಿವಾರ್ಯವಾಗಿ ರೈತರು ರಾಗಿ ಬಿತ್ತನೆ ಕಡೆ ಮುಖ ಮಾಡಿದ್ದರು. ರಾಗಿ ಬಿತ್ತನೆ ಪ್ರದೇಶ ಹೆಚ್ಚು: ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರಾಗಿ ಬಿತ್ತನೆ ಪ್ರದೇಶ ಹೆಚ್ಚಿದೆ. ಎಕರೆಗೆ 15 ರಿಂದ 20 ಸಾವಿರ ರೂ.ಗಳನ್ನು ಖರ್ಚು ಮಾಡಿ ರಾಗಿ ಬೆಳೆದಿರುವ ರೈತ, ಇದೀಗ ಅದರ ಅರ್ಧದಷ್ಟು ಹಣವನ್ನು ಕೊಯ್ಲಿಗೆ ವ್ಯಯಿಸಬೇಕಿದೆ. ಈ ನಡುವೆ ಮಳೆಯಿಂದ ತೆನೆಗಟ್ಟಿದ ರಾಗಿ ಹೊಲಗಳಲ್ಲೇ ಉದುರಿದರೆ ಹುಲ್ಲು ನೆಲಕ್ಕೆ ಬಿದ್ದು ಹಾಳಾಗುತ್ತದೆ. ಈ ನಡುವೆ ರಾಗಿ ಹುಲ್ಲು ಮತ್ತು ಕಾಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೂಲಿಕಾರರು ಮತ್ತು ದುಬಾರಿ ಗುತ್ತಿಗೆ ದರಕ್ಕೆ ಬೆಳೆಗಾರರು ಹೈರಾಣಾಗಿದ್ದಾರೆ.
ಕೃಷಿ ಇಲಾಖೆ ಮೂಲಕ ಒದಗಿಸಲಾಗಿರುವ ಯಂತ್ರಗಳ ಮೂಲಕ ಬಿದ್ದಿರುವ ರಾಗಿ ಬೆಳೆ ಕಟಾವಿಗೆ ಮುಂದಾದರೆ ಕೆಲಸ ಪರಿಪೂರ್ಣವಾಗದು ಎಂಬ ಹಿನ್ನೆಲೆಯಲ್ಲಿ ಆ ಯಂತ್ರಗಳ ಕಡೆ ರೈತರು ತಿರುಗಿಯೂ ನೋಡುತ್ತಿಲ್ಲ. ಕುಟುಂಬಸ್ಥರೇ ಸೇರಿ ಆದಷ್ಟು ರಾಗಿ ಕೊಯ್ಲು ಮಾಡಿಕೊಳ್ಳಲು ಮುಂದಾದರೆ ಮತ್ತೆಲ್ಲಿ ಮಳೆ ಶುರುವಾಗಿ ಮತ್ತಷ್ಟು ಹಾಳು ಮಾಡುತ್ತದೆಯೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಇದರಿಂದ ಅನಿವಾರ್ಯವಾಗಿ ಗುತ್ತಿಗೆ ನೀಡುವುದು ಅಥವಾ ಕೂಲಿಕಾರರ ಸಹಾಯದಿಂದ ಕೊಯ್ಲು ಮಾಡಬೇಕಿದೆ. ಒಟ್ಟನಲ್ಲಿ ರಾಗಿ ಬೆಳೆಯುವುದಕ್ಕಿಂತ ಅದರ ಕಟಾವಿಗೇ ಹೆಚ್ಚು ತಲೆ ಕೆಡಿಸಿಕೊಳ್ಳುವಂತಾಗಿದೆ.