ಭರಮಸಾಗರ: ಭರಮಸಾಗರ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ಪೈಪ್‌ಲೈನ್ ಅಳವಡಿಸುವ ಸಂಬಂಧ ಇಲ್ಲಿನ ಬಿಳಿಚೋಡು ರಸ್ತೆ ಮಾರ್ಗದಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸಲು ಬುಧವಾರ ಸರ್ವೆ ಕಾರ್ಯ ನಡೆಯಿತು.
ಬೆಂಗಳೂರಿನ ರೇಡಿಯನ್ ಸರ್ವೆ ಕಂಪನಿ ಭರಮಸಾಗರ ಏತ ನೀರಾವರಿ ಯೋಜನೆಯಡಿ 42 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೆರೆಗಳಿಗೆ ಪೈಪ್‌ಲೈನ್ ಅಳವಡಿಸುವ ಮಾರ್ಗದ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಕೆರೆಗಳನ್ನು ಸಂಪರ್ಕಿಸುವ ರಸ್ತೆ ಮಾರ್ಗದ ಸನಿಹದಲ್ಲಿನ ಭೂ ಮಟ್ಟ ಹಾಗೂ ಈ ಮಾರ್ಗಗಳಲ್ಲಿ ಬರುವ ಮರಗಳು ಕಂಬಗಳ ಸಂಖ್ಯೆ, ಮಣ್ಣಿನ ಗುಣ ಸೇರಿದಂತೆ ಇತರೆ ಮಾಹಿತಿಗಳನ್ನು ಸರ್ವೆ ಕಾರ್ಯದಲ್ಲಿ ದಾಖಲಿಸಲಾಗುತ್ತಿದೆ.
ಈಗಾಗಲೇ ರೇಡಿಯನ್ ಕಂಪನಿಯ ಎಂಟು ಜನರ ತಂಡ ಭರಮಸಾಗರದ ನಾನಾ ಭಾಗಗಳಲ್ಲಿ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಇನ್ನೂ ಎರಡು ತಂಡಗಳು ಬರಲಿದೆ ಎಂದು ಸರ್ವೇಯರ್ ವೆಂಕಟೇಶ್ ತಿಳಿಸಿದರು.
ಒಟ್ಟಾರೆ 42 ಕೆರೆಗಳ ಪೈಪ್‌ಲೈನ್ ಅಳವಡಿಕೆ ಕಾರ್ಯದ ಸರ್ವೆ ಕಾರ್ಯವನ್ನು ಮುಗಿಸಲು 20 ದಿನಗಳ ಕಾಲಾವಯನ್ನು ನೀಡಲಾಗಿದೆ. ಜೂನ್ ಒಂದರ ಒಳಗೆ ನೀರು ಹರಿಸುವ ಸಂಬಂಧ ಪೈಪ್‌ಲೈನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಎಲ್ಲಾ ಹಂತದ ಕಾಮಗಾರಿಗಳು ಚುರುಕು ಪಡೆದಿವೆ. ಭರಮಸಾಗರದ ಚಹಾ, ಹೋಟೆಲ್, ಇತರೆ ಜನರು ಗುಂಪು ಸೇರುವ ಕಡೆಗಳಲ್ಲಿ ಕೆರೆಗಳಿಗೆ ನೀರು ಹರಿಯುವ ಕುರಿತು ಚರ್ಚೆಗಳು ನಡೆಯುತ್ತಿವೆ. ತೋಟಗಾರಿಕೆ ಬೆಳೆಗಾರರು ನೀರು ಬಂದರೆ ಸಾಕಪ್ಪ ಎಂದು ಹರಕೆ ಹೊತ್ತಿದ್ದಾರೆ. ಈ ದಿಸೆಯಲ್ಲಿ ಶಂಕರನಾರಾಯಣ ಕನ್ಸ್‌ಟ್ರಕ್ಷನ್ ಕಂಪನಿ ಕಾಮಗಾರಿಯನ್ನು ಚುರುಕುಗೊಳಿಸಿದೆ. ಮಲೇಷಿಯಾ, ಅಪಘಾನಿಸ್ತಾನಗಳಲ್ಲಿ ಡ್ಯಾಂಗಳನ್ನು ಕಟ್ಟಿದ ಈ ಕಂಪನಿ ನಮ್ಮ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಬೇಗನೇ ಮುಗಿಸುತ್ತದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.
ಸಿರಿಗೆರೆ ಗ್ರಾಪಂನ ನೂತನ ಕಟ್ಟಡದ ಉದ್ಘಾಟನೆ ವೇಳೆ ತರಳಬಾಳು ಶ್ರೀಗಳು ಆಗಸ್ಟ್ ಒಳಗೆ ಕೆರೆಗಳಿಗೆ ನೀರು ಹರಿಯಲಿದೆ ಎಂದಿದ್ದರು. ಹಾಗಾಗಿ ಮಳೆಗಾಲಕ್ಕೆ ನೀರು ಬರುವುದು ನಿಶ್ಚಿತ ಎಂಬ ವಿಶ್ವಾಸ ಮೂಡಿದೆ.
20 ದಿನಗಳಲ್ಲಿ ಸರ್ವೆ ಕಾರ್ಯವನ್ನು ನಡೆಸಲು ಸೂಚಿಸಿದ್ದಾರೆ. ಮತ್ತಷ್ಟು ಸರ್ವೇಯರ್‌ಗಳು ಬರಲಿದ್ದು ಪೈಪ್ ಲೈನ್ ಅಳವಡಿಕೆ ಸಂಬಂಧಿತ ಸರ್ವೆ ಕಾರ್ಯ ಚುರುಕುಗೊಳ್ಳಲಿದೆ. ಸರ್ವೆಯಲ್ಲಿ ಗ್ರೌಂಡ್ ಲೆವೆಲ್ ಚೆಕ್ ಮಾಡಲಾಗುತ್ತದೆ. ಬಹುತೇಕ ರಸ್ತೆಗಳ ಪಕ್ಕದಲ್ಲೇ ಪೈಪ್‌ಲೈನ್ ಹಾದು ಹೋಗಲಿದೆ.
ಆಯುಬ್, ಮುಖ್ಯ ಸರ್ವೇಯರ್,
ರೇಡಿಯನ್ ಕಂಪನಿ, ಬೆಂಗಳೂರು