Advertisement

ಅಡಿಕೆ ಮರ ರಕ್ಷಣೆಗೆ ಸುಣ್ಣ ಲೇಪನ!

11:24 AM Jan 05, 2020 | Naveen |

ಭರಮಸಾಗರ: ಅಡಿಕೆ ಮರಗಳ ಉತ್ತಮ ಪೋಷಣೆಗಾಗಿ ಕಾಂಡದ ನಾಲ್ಕಾರು ಅಡಿ ಎತ್ತರದವರೆಗೆ ನಾನಾ ವಸ್ತುಗಳ ಮಿಶ್ರಣದೊಂದಿಗೆ ಸುಣ್ಣವನ್ನು ಲೇಪಿಸಲಾಗುತ್ತಿದೆ. ಈ ಮೂಲಕ ಬೆಳೆಗಾರರು ಮರಗಳ ರಕ್ಷಣೆಗೆ ತಮ್ಮದೇ ಐಡಿಯಾ ಮಾಡುತ್ತಿರುವುದು ಕಂಡುಬರುತ್ತಿದೆ.

Advertisement

ಕಳೆದ ನಾಲ್ಕಾರು ವರ್ಷಗಳಿಂದ ಮಳೆ ಕೈಕೊಟ್ಟ ವೇಳೆ ಬೆಳೆಗಾರರ ಪಾಡು ಹೇಳತೀರದಾಗಿತ್ತು. ಸಾಲಗಾರರಾಗಿ ಹನಿ ನೀರಿಗೂ ಪರಿತಪಿಸಿದ್ದರು. ಪ್ರಸಕ್ತ ವರ್ಷದ ಮಳೆ ಬೆಳೆಗಾರರ ಹಿಂದಿನ ಕಷ್ಟಗಳನ್ನು ಮರೆಸಿದ್ದು, ಹೆಚ್ಚಿನ ಇಳುವರಿಗಾಗಿ ಪ್ರಯತ್ನ ಮಾಡುವಂತೆ ಮಾಡಿದೆ.

ಲೇಪನ ಹೇಗೆ?: ಕೋಳಿ ಗೊಬ್ಬರ ಪೂರೈಕೆ ಸೇರಿದಂತೆ ಬೇಸಿಗೆಯ ಬಿಸಿಲ ಝಳಕ್ಕೆ ಮರ ಒಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಕಾಂಡಕ್ಕೆ ಉತ್ತಮ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ 4 ರಿಂದ 5 ಅಡಿ ಎತ್ತರದವರೆಗೆ ಸ್ವಾಭಾವಿಕ ಸುಟ್ಟ ಸುಣ್ಣದಿಂದ ಲೇಪನ ಮಾಡಿ ಮರಗಳನ್ನು ರಕ್ಷಿಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಸುಣ್ಣ ಲೇಪನದಿಂದ ಮರಗಳು ಮೃದುವಾಗುತ್ತವೆ ಎನ್ನಲಾಗುತ್ತದೆ. ಸುಣ್ಣದ ನೀರಿನೊಂದಿಗೆ ಹದಕ್ಕೆ ತಕ್ಕಷ್ಟು ಮೈದಾ ಹಿಟ್ಟು, ಹರೆಳೆಣ್ಣೆ, ಕುದಿಸಿ ಆರಿಸಿದ ಬೆಲ್ಲದ ಪಾನಕವನ್ನು ಮಿಶ್ರಣ ಮಾಡಿ ಪ್ರತಿ ಮರಕ್ಕೆ ಬಣ್ಣ ಬಳಿಯುವ ಬ್ರಶ್‌ ಬಳಸಿ ಲೇಪಿಸಲಾಗುತ್ತದೆ.

25 ರಿಂದ 30 ಕೆಜಿ ಕಲ್ಲು ಸುಣ್ಣ ಸುಮಾರು 600 ರಿಂದ 700 ಮರಗಳಿಗೆ ಬಳಿಯಲು ಬಳಕೆ ಆಗುತ್ತದೆ. ಸುಣ್ಣದ ಲೇಪನ ಮಾಡದೇ ಹೋದರೆ ನೀರಿನ ಕೊರತೆ ಇರುವ ತೋಟಗಳಾಗಿದ್ದಲ್ಲಿ ಬಿಸಿಲಿನ ಪರಿಣಾಮ ಮರದ ಕಾಂಡದ ಮೇಲೂ ಉಂಟಾಗಿ ಮರದ ಕಾಂಡ ಹಳದಿಗಟ್ಟುತ್ತದೆ. ಆಗ ಮರದ ಪೋಷಣೆ ಕ್ಷೀಣಿಸುತ್ತದೆ. ಮುಂದೆ ಅಡಿಕೆ ಇಳುವರಿಯಲ್ಲೂ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ಬೆಳೆಗಾರರ ಅಭಿಪ್ರಾಯ.

ಕೆಲವು ರೈತರು ಅಡಿಕೆ ತೋಟದ ಸುತ್ತಲಿನ ಮರಗಳ ಮೇಲೆ ಬಿಸಿಲ ಝಳದ ಪರಿಣಾಮ ತಪ್ಪಿಸಲು ಸುತ್ತಲೂ ತೇಗ, ಬೀಟೆ, ಅರಬೇವು ಸೇರಿದಂತೆ ಇತರೆ ಮರಗಳನ್ನು ನೆರಳಿನ ಉದ್ದೇಶದಿಂದ ಬೆಳೆಯುತ್ತಿದ್ದಾರೆ. ಹಲವರು ಕಾಂಡದ ಸುಮಾರು 5-6 ಅಡಿವರೆಗೂ ತೆಂಗಿನ ಗರಿಗಳಿಂದ ಹೆಣೆದು ನೆರಳು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸತತ ಬರದಿಂದ ಕಂಗಾಲಾಗಿದ್ದ ಅಡಿಕೆ ಬೆಳೆಗಾರರು, ಈ ಬಾರಿ ಆದ ಉತ್ತಮ ಮಳೆಯಿಂದ ಅಡಿಕೆ ಮರಗಳನ್ನು ರಕ್ಷಿಸಿಕೊಂಡು ಉತ್ತಮ ಇಳುವರಿ ಪಡೆಯುವತ್ತ ಚಿತ್ತ ಹರಿಸಿದ್ದಾರೆ.

Advertisement

ಕಳೆದ ವರ್ಷ ಮಳೆಯಿಲ್ಲದೆ ಟ್ಯಾಂಕರ್‌ ನೀರಿನಿಂದ ತೋಟವನ್ನು ಉಳಿಸಿಕೊಂಡಿದ್ದೇವೆ. ಈ ವರ್ಷ ಕೊಳವೆ ಬಾವಿಗಳಲ್ಲಿ ನೀರು ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ತೋಟದ ಅಭಿವೃದ್ಧಿಗಾಗಿ ಉತ್ತಮ ನೀರು ಪೂರೈಕೆಯೊಂದಿಗೆ ಮರಗಳ ರಕ್ಷಣೆಗಾಗಿ ಸುಣ್ಣ ಬಳಿಯುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ಮರಗಳಿಗೆ ಹಲವು ರೀತಿಯಲ್ಲಿ ಅನುಕೂಲಗಳಿವೆ.
ಕಣಮಪ್ಪ,
ಅಡಿಕೆ ಬೆಳೆಗಾರರು, ಹಳವುದರ

„ಎಚ್‌.ಬಿ. ನಿರಂಜನ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next