ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಸೀಬಾರ ಸಮೀಪ ಶನಿವಾರದಿಂದ ಎರಡು ದಿನಗಳ ಚಳಿಗಾಲದ ಏರೋ ಸ್ಪೋರ್ಟ್ಸ್ ಚಟುವಟಿಕೆ ಆರಂಭಗೊಂಡಿತು.
ಬೆಂಗಳೂರಿನ ಅಂಕಾ ಹೆರೋ ಮತ್ತು ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್, ಚಿತ್ರದುರ್ಗ ಮುರುಘಾ ಮಠದ ಬಸವ ಕೇಂದ್ರ, ಎಸ್‌ಜೆಎಂ ಹಾಬಿ ಆ್ಯಂಡ್ ಅಡ್ವೆಂಚರ್ ಅಕಾಡೆಮಿ ವತಿಯಿಂದ ಆಯೋಜಿಸಿರುವ ಈ ಸಾಹಸಮಯ ಕ್ರೀಡೆಯನ್ನು ಆಯೋಜಿಸಲಾಗಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶದ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಏರೋ ಸ್ಪೋರ್ಟ್ಸ್ ನಿಮಿತ್ತ ಪ್ಯಾರಾ ಸೈಲಿಂಗ್, ಪ್ಯಾರಾ ಮೋಟರಿಂಗ್ ಮತ್ತು ಮೈಕ್ರೋಲೈಟ್ ಪ್ಲೈಯಿಂಗ್ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಶನಿವಾರ ಮೂರು ವಿಭಾಗದ ಚಟುವಟಿಕೆಗಳಲ್ಲಿ ತಲಾ 20ಕ್ಕೂ ಹೆಚ್ಚು ಆಸಕ್ತರು ಆಯೋಜಕರು ನಿಗದಿಪಡಿಸಿದ ಶುಲ್ಕ ಪಾವತಿಸಿ ಪಾಲ್ಗೊಂಡಿದ್ದರು. ಯುವಕ, ಯುವತಿಯರು, ಮಕ್ಕಳು ಹಾಗೂ ಮಧ್ಯ ವಯಸ್ಕರು ಕೂಡ ಏರೋ ನ್ಪೋರ್ಟ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು. ಹೆಚ್ಚಿನ ಜನರು ಪ್ಯಾರಾ ಸೈಲಿಂಗ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಸುಮಾರು 100 ಅಡಿಗಳಿಗೂ ಎತ್ತರದಲ್ಲಿ ಹಾರಾಟ ನಡೆಸಿದರು. ಇದೇ ಮೊದಲ ಬಾರಿ ಚಿತ್ರದುರ್ಗ ನಗರದ ಸನಿಹದಲ್ಲಿ ಇಂತಹ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿರುವದು ಸಂತಸ ತಂದಿದೆ ಎಂದು ಪಾಲ್ಗೊಂಡಿದ್ದವರು ಅಭಿಪ್ರಾಯಪಟ್ಟರು.
ಏರೋ ಸ್ಪೋರ್ಟ್ಸ್ ನಲ್ಲಿ ಪಾಲ್ಗೊಳ್ಳುವ ಓರ್ವ ವ್ಯಕ್ತಿಗೆ ಪ್ಯಾರಾ ಸೈಲಿಂಗ್‌ಗೆ 450 ರೂ., ಪ್ಯಾರಾ ಮೋಟರಿಂಗ್‌ಗೆ 1800 ರೂ., ಮೈಕ್ರೋ ಲೈಟ್ ಪ್ಲೈಯಿಂಗ್‌ಗೆ 2600 ರೂ.ಗಳನ್ನು ಆಯೋಜಕರು ನಿಗದಿ ಮಾಡಿದ್ದಾರೆ. ಇದೇ ಕ್ರೀಡೆಗಳಲ್ಲಿ ಬೆಂಗಳೂರು ಮತ್ತಿತರ ನಗರಗಳಲ್ಲಿ ಪಾಲ್ಗೊಳ್ಳಲು ದುಬಾರಿ ಶುಲ್ಕ ತೆರಬೇಕಾಗುತ್ತದೆ. ಭಾನುವಾರ ರಜೆ ಇರುವ ಕಾರಣ ಮತ್ತಷ್ಟು ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾನುವಾರ ಒಂದು ದಿನ ಮಾತ್ರ ಏರೋಸ್ಪೋರ್ಟ್ಸ್ ಚಟುವಟಿಕೆಗಳು ನಡೆಯುತ್ತದೆ ಎಂದು ಆಯೋಜಕರು ತಿಳಿಸಿದರು.
ಪ್ಯಾರಾ ಸೈಲಿಂಗ್‌ನಲ್ಲಿ ಪಾಲ್ಗೊಂಡಿದ್ದೆ. ಸಖತ್ ಥ್ರಿಲ್ ಇದೆ. ಹಾರಾಟ ಹೊಸ ರೋಮಾಂಚನ ನೀಡಿತು. ಚಿತ್ರದುರ್ಗದ ಸನಿಹದಲ್ಲೇ ಏರೋ ಸ್ಪೋರ್ಟ್ಸ್ ಚಟುವಟಿಕೆ ನಡೆಯುತ್ತಿರುವುದು ಸಂತಸ ತಂದಿದೆ. ನವೀನ್ ಚಿತ್ರದುರ್ಗ, ಏರೋಸ್ಪೋರ್ಟ್ಸ್ ನಲ್ಲಿ ಪಾಲ್ಗೊಂಡವರು.