ಮುಂಬಯಿ: ನಮ್ಮ ಸಂಘದಲ್ಲಿ ಮುಂದೆ ಅನೇಕ ಒಳ್ಳೆಯ ಕಾರ್ಯಕ್ರಮಗಳು ನಡೆಯಬೇಕು. ನಮ್ಮ ಸಮಾಜ ಎತ್ತರಕ್ಕೆ ಬೆಳೆದು ಅಭಿವೃದ್ಧಿ ಕಾಣಬೇಕೆಂದು ನನ್ನ ಆಸೆ. ಅದಕ್ಕಾಗಿ ನಾವೆಲ್ಲ ಒಗ್ಗೂಡಿ ಸಂಘದಲ್ಲಿ ನಮ್ಮನ್ನು ನಾವೂ ತೊಡಗಿಸಬೇಕು. ಅಧಿಕಾರ ಶಾಶ್ವತವಲ್ಲ ಸೇವೆಯೇ ಸ್ಥಿರವಾದುದು. ಆದ್ದರಿಂದ ಅವ ಕಾಶಗಳನ್ನು ಸದುಪಯೋಗ ಪಡಿಸಿ ಸಂಸ್ಥೆಯ ಮೂಲಕ ಸಮುದಾಯ ವನ್ನು ಮುನ್ನಡೆಸೋಣ ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ, ನ್ಯಾಯವಾದಿ ಶೇಖರ್ ಎಸ್. ಭಂಡಾರಿ ತಿಳಿಸಿದರು.
ಜು. 28ರಂದು ಅಪರಾಹ್ನ ಸಯಾನ್‌ನ ಮುಖ್ಯ ಅಧ್ಯಾಪಕ ಭವನದ ಶ್ರೀ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ನಡೆದ ಭಂಡಾರಿ ಸೇವಾ ಸಮಿತಿಯ 65 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಎರಡು ಅವಧಿಗೆ ಈ ಸಂಸ್ಥೆಯ ಚುಕ್ಕಾಣಿಯನ್ನಿತ್ತು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಸಹಯೋಗವನ್ನಿತ್ತ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಂದಿನ ಅಧ್ಯಕ್ಷರಿಗೂ ಹಾಗೂ ನೂತನ ಸಮಿತಿಗೂ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದರು.
ಸೇವಾ ಸಮಿತಿಯ ಉಪಾಧ್ಯಕ್ಷರಾದ ನ್ಯಾಯವಾದಿ ರಾಮಣ್ಣ ಎಂ. ಭಂಡಾರಿ ಮತ್ತು ಪ್ರಭಾಕರ್ ಪಿ. ಭಂಡಾರಿ, ಜೊತೆ ಕಾರ್ಯದರ್ಶಿ ಶಶಿಧರ್ ಡಿ. ಭಂಡಾರಿ ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ, ಕಾರ್ಯದರ್ಶಿ ರೇಖಾ ಎ. ಭಂಡಾರಿ, ಕೋಶಾಧಿಕಾರಿ ಕು| ಕ್ಷಮಾ ಆರ್. ಭಂಡಾರಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದಾಧಿಕಾರಿಗಳನ್ನೊಳಗೊಂಡು ಅಧ್ಯಕ್ಷ ಶೇಖರ ಭಂಡಾರಿ ಅವರು ದೀಪ ಪ್ರಜ್ವಲಿಸಿ, ಕುಲದೇವರಾದ ಕಚ್ಚಾರು ಶ್ರೀ ನಾಗೇಶ್ವರ ದೇವರಿಗೆ ಆರತಿ ನೆರವೇರಿಸಿ ಸಭೆಗೆ ಚಾಲನೆ ನೀಡಿದರು. ಸಭೆಯಲ್ಲಿ ಸೇವಾ ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರು, ಭಂಡಾರಿ ಸಮಾಜದ ಬಂಧುಗಳು ಉಪಸ್ಥಿತರಿದ್ದು ಗತ ಸಾಲಿನಲ್ಲಿ ಅಗಲಿದ ಸರ್ವ ಭಂಡಾರಿ ಬಾಂಧವರು ಹಾಗೂ ಗಣ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಬಾಷ್ಪಾಂಜಲಿ ಅರ್ಪಿಸಲಾಯಿತು. ಸಭಿಕರ ಪರವಾಗಿ ರಂಜಿತ್ ಎಸ್. ಭಂಡಾರಿ, ಪ್ರಕಾಶ್ ಭಂಡಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಕು| ರಿಯಾ ಆರ್. ಭಂಡಾರಿ ಪ್ರಾರ್ಥನೆಗೈದರು. ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್. ಭಂಡಾರಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಶಶಿಧರ್ ಡಿ. ಭಂಡಾರಿ ಗತ ವಾರ್ಷಿಕ ಮಹಾಸಭೆ ವರದಿ, ವಾರ್ಷಿಕ ಚಟುವಟಿಕೆಗಳ ಮಾಹಿತಿ ನೀಡಿದರು. ಗೌರವ ಕೋಶಾಧಿಕಾರಿ ಕರುಣಾಕರ ಜಿ. ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ.ಭಂಡಾರಿ ವಂದಿಸಿದರು. ಸಭೆಯ ಕೊನೆಯಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಿತಿಯ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ನೆರವು ವಿತರಿಸಿ, ಪ್ರತಿಭಾವಂದ ವಿದ್ಯಾರ್ಥಿಗಳನ್ನು ಗೌರವಿಸಿ ಶುಭಹಾರೈಸಿದರು.
ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‌ನ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್. ಭಂಡಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಪಿ. ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಸಂಸ್ಥೆಯ 2018-2020 ರ ಎರಡು ವರ್ಷಗಳ ಕಾಲಾವಧಿಗೆ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಹೆಸರನ್ನು ಪ್ರಕಟಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಆರ್. ಎಂ. ಭಂಡಾರಿ, ಪ್ರಧಾನ ಕಾರ್ಯದರ್ಶಿ ಆಗಿ ಶಶಿಧರ್ ಡಿ. ಭಂಡಾರಿ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್