ನಟಿ ಭಾಮ ಖುಷಿಯಾಗಿದ್ದಾರೆ. ಆ ಖುಷಿಗೆ ಕಾರಣ, “ರಾಗ’. ಸದ್ಯದಲ್ಲೇ ತೆರೆಗೆ ಬರುತ್ತಿರುವ ಚಿತ್ರದ ಮೇಲೆ ಭಾಮಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಅದಕ್ಕೆ ಇನ್ನೊಂದು ಕಾರಣವೂ ಇದೆ. ಅವರೇ ಹೇಳುವಂತೆ, “ಅವರ ವೃತ್ತಿ ಬದುಕಿನಲ್ಲಿ “ರಾಗ’ ಅತ್ಯಂತ ಅಪರೂಪ ಮತ್ತು ಅದ್ಭುತ ಸಿನಿಮಾ’ ಎಂಬುದು ಭಾಮ ಮಾತು.
ಆರಂಭದಿಂದಲೂ “ರಾಗ’ ಒಂದಷ್ಟು ನಿರೀಕ್ಷೆ ಹುಟ್ಟಿಸಿಕೊಂಡೇ ಬಂದಿದೆ. ಇದೇ ಮೊದಲ ಸಲ ಭಾಮ “ರಾಗ’ದಲ್ಲಿ ಅಂಧೆಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಪಾತ್ರದಲ್ಲೇ ಜೀವಿಸಿದಷ್ಟು ಸಂತಸದಲ್ಲಿದ್ದಾರೆ. ನಿರ್ದೇಶಕ ಪಿ.ಸಿ.ಶೇಖರ್ ಜತೆ “ಅರ್ಜುನ’ ಸಿನಿಮಾ ಮಾಡಿದ್ದ ಭಾಮಗೆ “ರಾಗ’ ಎರಡನೇ ಸಿನಿಮಾ. ಈ ಚಿತ್ರ ಮಾಡೋಕೆ ಮುಖ್ಯ ಕಾರಣ, ಕಥೆ ಮತ್ತು ಪಾತ್ರವಂತೆ.ಅದರೊಂದಿಗೆ ನಿರ್ದೇಶಕರು ಮತ್ತು ಚಿತ್ರತಂಡ ಎಂಬುದನ್ನು ಮರೆಯೋದಿಲ್ಲ ಭಾಮ. “ಮೊದಲು ಶೇಖರ್ ಸರ್ ಕಥೆ ಹೇಳ್ಳೋಕೆ ಬಂದಾಗ, ನಾರ್ಮಲ್ ಆಗಿರುತ್ತೇನೋ ಅಂದುಕೊಂಡಿದ್ದೆ, ಕಥೆ,ಪಾತ್ರ ಬಗ್ಗೆ ತಿಳಿದ ಮೇಲೆ ಮಿಸ್ ಮಾಡಿಕೊಳ್ಳಬಾರದು ಅಂತ ಒಪ್ಪಿದೆ. ನಿರ್ದೇಶಕ ಶೇಖರ್ ಬಗ್ಗೆ ಹೇಳ್ಳೋದಾದರೆ, ಅವರಿಗೆ ಏನು ಬೇಕು, ಬೇಡ ಎಂಬುದರ ಬಗ್ಗೆ ಸ್ಪಷ್ಟತೆ ಇದೆ. ಎಲ್ಲಾ ಭಾಷೆಯಿಂದಲೂ ಸೇರಿ ನನಗೆ ಇದು 45ನೇ ಸಿನಿಮಾ. ಹಾಗಾಗಿ, ನನಗೂ ಆ ಪಾತ್ರದ ಬಗ್ಗೆ ಕುತೂಹಲವಿತ್ತು. ಅಂಥದ್ದೊಂದು ಪಾತ್ರ ಮಾಡಲೇಬೇಕು ಅಂತ ಚಾಲೆಂಜ್ ತೆಗೆದುಕೊಂಡು ಮಾಡಿದ್ದೇನೆ’ ಎನ್ನುತ್ತಲೇ ಪಾತ್ರದ ಬಗ್ಗೆ ವಾಲುತ್ತಾರೆ ಭಾಮ.
ಕಥೆ, ಪಾತ್ರ ಮುಖ್ಯವೇ ಹೊರತು ಹೀರೋ ಅಲ್ಲ: “ನನಗೆ ಕಥೆ ಮತ್ತು ಪಾತ್ರ ಇಷ್ಟವಾಗಿದ್ದೇ ತಡ, ಯಾರು ಹೀರೋ, ಅಂತ ನೋಡಲಿಲ್ಲ. ಯಾಕೆಂದರೆ, ಒಬ್ಬ ನಟಿಗೆ ಕಥೆ, ಪಾತ್ರ ಮುಖ್ಯವೇ ಹೊರತು, ಹೀರೋ ಯಾರೆಂಬುದನ್ನು ನೋಡಲ್ಲ. ಅದರಲ್ಲೂ ನನಗೆ ಕಥೆಯೇ ಎಲ್ಲಾ ಆಗಿದ್ದರಿಂದ, ಒಪ್ಪಿಕೊಂಡೆ. ನನಗೂ ಹೊಸದೇನನ್ನೋ ಮಾಡಬೇಕು ಎನಿಸಿತ್ತು. ಅದೊಂದು ಅಂಧೆ ಪಾತ್ರವಾಗಿದ್ದರಿಂದ, ಚಾಲೆಂಜಿಂಗ್ ಎನಿಸಿತು.
ನಿಭಾಯಿಸುತ್ತೇನಾ ಎಂಬ ಭಯವಿತ್ತು. ಒಳ್ಳೇ ತಂಡ ಸಿಕ್ಕಿದ್ದರಿಂದ ಆ ಪಾತ್ರವನ್ನು ಯಶಸ್ವಿಯಾಗಿ ಪೂರೈಸಿದ್ದೇನೆ ಎಂಬ ನಂಬಿಕೆ ಇದೆ. ಇನ್ನು, ಅಂಧೆ ಪಾತ್ರ ಅಂದಾಕ್ಷಣ, ಸುಮ್ಮನೆ ಕಣ್ಣುಮುಚ್ಚಿಕೊಂಡರೆ ಆಗೋದಿಲ್ಲ ಎಂಬುದು ಗೊತ್ತಿತ್ತು. ಒಬ್ಬ ಶ್ರೀಮಂತ ಹುಡುಗಿ ಅವಳು. ಆದರೆ, ಎರಡೂ ಕಣ್ಣುಗಳಿಲ್ಲ. ಎಮೋಷನಲ್ ಕ್ಯಾರಿ ಮಾಡಬೇಕಿತ್ತು. ಬಾಡಿಲಾಂಗ್ವೇಜ್ ಕೂಡ ಮುಖ್ಯವಾಗಿತ್ತು. ಅಂಧರಿಗೂ, ನಗು, ನೋವು, ನಲಿವು, ಕೋಪ, ಭಯ ಎಲ್ಲವೂ ಇರುತ್ತೆ. ಅದನ್ನೆಲ್ಲಾ ಅವರು ಹೇಗೆ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲವೂ ಇತ್ತು. ಅಂಧರ ವಾಕಿಂಗ್ ಸ್ಟೈಲು, ಅವರ ಹಾವಭಾವ ಎಲ್ಲವೂ ಹಾಗೆಯೇ ಇರಬೇಕು, ಎಲ್ಲೂ ಅದು ನಾಟಕೀಯ ಎನಿಸಬಾರದು ಎಂಬ ಚಾಲೆಂಜ್ ಕೂಡ ಇತ್ತು. ಅದಕ್ಕಾಗಿ ಎರಡು ಅಂಧರ ಶಾಲೆಯ ಬಳಿ ಹೋಗಿ, ಸ್ವಲ್ಪ ದೂರದಲ್ಲೇ ಇದ್ದು, ಕೆಲ ಅಂಧರ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದೆ. ಒಂದು ಐಡಿಯಾ ಬಂತು. ಅದನ್ನೇ ಫಾಲೋ ಮಾಡಿದೆ, ವಕೌìಟ್ ಆಯ್ತು’ ಎಂದು ಪಾತ್ರದ ತಯಾರಿ ಕುರಿತು ಹೇಳುತ್ತಾರೆ ಭಾಮ. ಪೇನ್‌ಫುಲ್ ಬಟ್ ಸ್ವೀಟ್ ಜರ್ನಿ: ಇನ್ನು, ಮಿತ್ರ ಅವರೊಂದಿಗೆ ಕೆಲಸ ಮಾಡಿದ್ದು, ಒಂದು ಮರೆಯದ ಅನುಭವ ಎನ್ನುತ್ತಾರೆ ಭಾಮ. “ನಾನು ಇದುವರೆಗೆ ಮಾಡಿದ ಎಲ್ಲಾ ಚಿತ್ರಗಳ ಕೋ ಆರ್ಟಿಸ್ಟ್ ಥರಾನೇ ಮಿತ್ರ ಅವರೂ ಕಂಡರು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ನನ್ನ ಬೆಸ್ಟ್ ಕೋ-ಆರ್ಟಿಸ್ಟ್ ಎನ್ನಬಹುದು. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಸಿನಿಮಾ ಮುಗಿಯೋವರೆಗೆ, ಕಥೆ, ಪಾತ್ರ, ದೃಶ್ಯಗಳ ಹೊರತಾಗಿ ಬೇರೇನೂ ಚರ್ಚೆ ಮಾಡುತ್ತಿರಲಿಲ್ಲ. ಹಾಗಾಗಿ, ಅವರೊಂದಿಗಿನ ಕೆಲಸ ನನ್ನ ಮರೆಯದ ಚಿತ್ರವನ್ನಾಗಿಸಿತು.
“ರಾಗ’ ಬಗ್ಗೆ ಹೇಳುವುದಾದರೆ, ಅದೊಂದು ಆಪ್ತವೆನಿಸುವ ಸಿನಿಮಾ. ನನ್ನ ಸಿನಿಲೈಫಲ್ಲಿ ಹೊಸ ಜರ್ನಿ ಅದು. ಕ್ಯಾಮೆರಾಮೆನ್ ವೈದಿ, ನಿರ್ದೇಶಕ ಶೇಖರ್, ಮಿತ್ರ, ಇತರೆ ತಂತ್ರಜ್ಞರು, ಕಲಾವಿದರ ಸಹಕಾರ, ಪ್ರೋತ್ಸಾಹದಿಂದ “ರಾಗ’ದಲ್ಲಿ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಇನ್ನು ಇಲ್ಲಿ ಕಷ್ಟ ಎನಿಸಿದ್ದು ಅಂದರೆ, ಎರಡೂ ಕಣ್ಣುಗುಡ್ಡೆಗಳನ್ನು ಮಧ್ಯೆಕ್ಕೆ ತಂದು, ಕ್ಯಾಮೆರಾ ಮುಂದೆ ನಿಲ್ಲಬೇಕು. ಒಂದು ಶಾಟ್‌ಗೆ ಹತ್ತು ಟೇಕ್ ಆದರೂ ಆಗುತ್ತಿತ್ತು. 46 ಶಾಟ್‌ಗಳಲ್ಲಿ ಹಾಗೆ ಇರಬೇಕು, ಒಂದೊಂದು ಶಾಟ್ 10 ಸಲ ಟೇಕ್ ಆಗಿ, 460 ಸಲ ಟೇಕ್ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ದಿನಕ್ಕೆ ಎರಡು ತಾಸು ನನಗೆ ತಲೆನೋವು ಬರುತ್ತಿತ್ತು. ಮಾತ್ರೆ ತಗೊಂಡು ಕೆಲಸ ಮಾಡಿದೆ. ಅದು ಪಾತ್ರದ ಮೇಲಿನ ಪ್ರೀತಿಗೆ. ಪೈನ್‌ಫುಲ್ ಬಟ್, ವೇರಿ ಸ್ವೀಟ್ ಜರ್ನಿ’ ಎಂದು ಮಾತು ಮುಗಿಸುತ್ತಾರೆ ಭಾಮ.