ಭಾಲ್ಕಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆದಿದ್ದು, ಮಳೆ ಕೊರತೆಯಿಂದ ನೀರಿಲ್ಲದೇ ಬಾಡಿ ಹೋಗುತ್ತಿವೆ. ತಕ್ಷಣವೇ ಮಳೆಯ ಅಗತ್ಯವಿದ್ದು, ಮಳೆಗಾಗಿ ರೈತರು ಮುಗಿಲು ನೋಡುವಂತಾಗಿದೆ.
ಸತತ ಬರದಿಂದ ತತ್ತರಿಸಿದ ತಾಲೂಕಿನ ರೈತರ ಪಾಲಿಗೆ ಈ ಬಾರಿಯೂ ಬರದ ಕಾರ್ಮೋಡ ಕವಿದಿದ್ದು, ಮುಂಗಾರು ಕೈ ಕೊಡುತ್ತಿದೆ. ಅಲ್ಪ ಸ್ವಲ್ಪ ಮಳೆಯಿಂದಾಗಿ ತಾಲೂಕಿನ ಕೆಲ ಕಡೆ ಬಿತ್ತನೆ ಮಾಡಿದ ರೈತರು, ಜುಲೈ ತಿಂಗಳು ಕಳೆಯುತ್ತಾ ಬಂದರೂ ಉತ್ತಮ ಮಳೆಯಾಗದಿರುವ ಕಾರಣ ಬರುಲಿರವ ಮಳೆಯ ಭರವಸೆಯಲ್ಲಿ ದಿನ ದೂಡುವಂತಾಗಿದೆ. ಮುಂಗಾರು ಆರಂಭಕ್ಕಿಂತ ಮೊದಲೇ ತಾಲೂಕಿನ ರೈತರು ರಂಟೆ, ಕುಂಟೆ ಹೊಡೆದು ಹರ್ಷದಿಂದ ಬಿತ್ತನೆ ಕಾರ್ಯ ಪ್ರಾರಂಭಿಸಲು ಸಜ್ಜಾಗಿದ್ದರು. ಆದರೆ ಸಮಯಕ್ಕೆ ಸುರಿಯದ ಮಳೆಯಿಂದಾಗಿ ತಾಲೂಕಿನ ರೈತರು ಕಂಗಾಲಾಗಿದ್ದು, ದೇವರ ಮೊರೆ ಹೋಗುತ್ತಿದ್ದಾರೆ.
ಆಷಾಢ ಗಾಳಿಗೆ ಮೋಡಗಳು ಓಡುತ್ತಿದ್ದು, ಬೀಸುವ ಗಾಳಿಗೆ ಭೂಮಿ ಕೂಡ ಬಿರುಸುಗೊಂಡು ಮೊಳಕೆ ಮೇಲೇಳದಂತಾಗಿದೆ. ಈಗಾಗಲೆ ಬಿತ್ತಿದ ರೈತರ ಹಾಗೂ ಇನ್ನೂ ಬಿತ್ತನೆ ಮಾಡದ ರೈತರ ಗೋಳು ಕೇಳುವವರಿಲ್ಲದಂತಾಗಿದೆ.
ತಾಲೂಕಿನ ಕೆಲವೆಡೆ ಅಲ್ಪ ಸ್ವಲ್ಪ ಮಳೆಯಾಗಿದ್ದು, ಬೆಳೆಗಳಿಗೆ ಸಾಕಾಗುವಷ್ಟು ಮಳೆ ಇಲ್ಲ. ಹೀಗಾಗಿ ಕೆಲವು ರೈತರು ತಮ್ಮ ಬೆಳೆಗಳಿಗೆ ಕೊಳವೆಬಾವಿ, ತೆರೆದ ಬಾವಿಗಳಿಂದ ನೀರುಣಿಸುತ್ತಿದ್ದಾರೆ. ಆದರೆ ಅಂತರ್ಜಲ ಕುಸಿತ ಕಂಡಿದ್ದರಿಂದ ಹೆಚ್ಚಿನ ರೈತರ ಕೊಳವೆ ಬಾವಿಯೂ ಕೈ ಕೊಟ್ಟಿವೆ. ಇದರಿಂದ ಇಲ್ಲಿಯ ರೈತರ ಪಾಡು ಹೇಳತೀರದಾಗಿದೆ.
ತಾಲೂಕಿನಲ್ಲಿ ಒಟ್ಟು 72,740 ಹೆಕ್ಟೇರ್ ಕೃಷಿಭೂಮಿ ಒದೆ. ಅದರಲ್ಲಿ ಸುಮಾರು 5.36 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಸರಾಸರಿ ಇಳುವರಿ ಉತ್ಪಾದನೆ ಗುರಿ ಇದೆ. 12 ಸಾವಿರ ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ 39,850 ಟನ್‌ನಷ್ಟು ಏಕದಳ ಧಾನ್ಯ ಬೆಳೆಯಲಾಗುತ್ತದೆ. ಅಲ್ಲದೆ 21,890 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಇತರೆ ಬೆಳೆ ಬೆಳೆಯುವ ಗುರಿ ಇದೆ. ಸುಮಾರು 5,200 ಹೆಕ್ಟೇರ್ ಭೂಮಿಯಲ್ಲಿ ವಾಣಿಜ್ಯ ಬೆಳೆ ಕಬ್ಬು ಇದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಇದುವರೆಗೆ ಶೇ.60 ಮಾತ್ರ ಬಿತ್ತನೆಯಾಗಿದ್ದು, ಭೂಮಿಗೆ ಬೀಜ ಹಾಕಿದ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬಿತ್ತನೆ ಮಾಡದ ರೈತರು ಹಿಂಗಾರು ಫಸಲಿಗಾಗಿ ಕಾಯುತ್ತಿದ್ದಾರೆ.
ತಾಲೂಕಿನ ಖಟಕಚಿಂಚೋಳಿ ಹೊಬಳಿಯ ಏಣಕೂರ, ಡಾವರಗಾಂವ, ನಾವದಗಿ, ಕುಂಟೆ ಸಿರಸಿ, ಕುರಬಖೆಳಗಿ, ಮಾಸಿಮಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು ಬಿತ್ತನೆ ಕಾರ್ಯ ಶೇ.80 ಮುಗಿಸಲಾಗಿದೆ. ಆದರೆ ಹಲಬರ್ಗಾ, ಸಾಯಿಗಾಂವ, ಸೇರಿದಂತೆ ಕೆಲವು ಹೋಬಳಿಗಳ ಗ್ರಾಮಗಳಲ್ಲಿ ಸಮರ್ಪಕ ಮಳೆಯಾಗದಿರುವ ಕಾರಣ ಬಿತ್ತನೆ ಕಾರ್ಯ ಕುಂಠಿತವಾಗಿದೆ.
ಒಟ್ಟಿನಲ್ಲಿ ಮುಂಗಾರು ಮಳೆ ಬಾರದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೋಡ ಕವಿದ ವಾತಾವರಣದಿಂದ ಹವಾಮಾನ ತಂಪು ಆಗಿದ್ದರೂ ಮಳೆ ಬರುತ್ತಿಲ್ಲ. ಬಿತ್ತಿದ ಜೀಜ ಮೊಳಕೆಯೊಡೆದರೂ ಉಳಿಸಿಕೊಳ್ಳದೇ ರೈತರು ಅಸಹಾಯಕರಾಗಿದ್ದಾರೆ.