ಭಾಲ್ಕಿ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ನಡೆಯಲಿರುವ ಸಾಹಿತ್ಯ ಸಮ್ಮೇಳನದ ವೇದಿಕೆ ಸಿದ್ಧ ಮಾಡುವಲ್ಲಿ ಪರಿಷತ್ ಪದಾಧಿಕಾರಿಗಳು ವಿಫಲರಾಗಿದ್ದಾರೆ. ಪಟ್ಟಣದ ಪುರಭವನದ ಆವರಣದಲ್ಲಿ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಕೆಲವು ದಿವಸಗಳ ಹಿಂದೆ ವೇದಿಕೆ ಸಿದ್ಧಮಾಡಲಾಗಿತ್ತು. ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಪುರಭವನ ಆವರಣ ಸ್ವಚ್ಛಗೊಳಿಸಿ ನುಡಿ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಲ್ಲರೂ ಒಕ್ಕೂರಲಿನಿಂದ ನಿರ್ಣಯಿಸಿದ್ದರು. ಆದರೆ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಒಗ್ಗಟ್ಟಿನ ಕೊರತೆಯಿಂದಾಗಿ ಪುರಭವನದ ಅವರಣದ ವೇದಿಕೆ ಸಿದ್ಧತೆ ಮಾಡುವಲ್ಲಿ ಹಿನ್ನಡೆಯಾಗಿದ್ದು, ಇದರಿಂದ ತಾಲೂಕಿನ ಸಾಹಿತ್ಯಾಸಕ್ತರು ನಿರುತ್ಸಾಹಕ್ಕೆ ಒಳಗಾಗುವಂತಾಗಿದೆ.
Advertisement
ಪಟ್ಟಣದ ಪುರಭವನದ ಸುತ್ತಲೂ ಪ್ರತಿಷ್ಠಿತ ಗುತ್ತಿಗೆದಾರರೊಬ್ಬರು ಕಾಂಕ್ರಿಟ್, ಸಿಮೆಂಟ್ ಮುಂತಾದ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅವುಗಳನ್ನು ತೆರವುಗೊಳಿಸಿ ವೇದಿಕೆ ಸಿದ್ಧ ಮಾಡಬೇಕಾಗಿತ್ತು. ಆದರೆ ಸಾವಿರಾರು ಸಾಹಿತ್ಯಾಸಕ್ತರು ಸೇರುವ ಸ್ಥಳದಲ್ಲಿ ಬರೀ ಕಾಂಕ್ರಿಟ್ ಸೇರಿದಂತೆ ತ್ಯಾಜ್ಯ ಪದಾರ್ಥವೇ ತುಂಬಿಕೊಂಡಿದೆ. ಇದನ್ನು ತೆರವುಗೊಳಿಸಿ ನುಡಿ ಜಾತ್ರೆ ಸಂಭ್ರಮದಿಂದ ಆಚರಿಸಬೇಕು ಎನ್ನುವ ಮಾತು ಮರಿಚೀಕೆಯಾಗಿದೆ. ಈ ಹಿಂದಿನ ಕಸಾಪ ಅಧ್ಯಕ್ಷ ವಸಂತ ಹುಣಸನಾಳೆ ಅವರ ಅಧ್ಯಕ್ಷತೆಯಲ್ಲಿ ಎರಡು ತಾಲೂಕು ಸಮ್ಮೇಳನಗಳು ನಡೆದವು. ಎರಡೂ ಸಮ್ಮೇಳನಗಳಲ್ಲಿಯೂ ಎಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದರು. ಆದರೆ ಈಗ ವೇದಿಕೆ ಸಿದ್ಧ ಮಾಡುವಲ್ಲಿಯೇ ವಿಫಲರಾದ ಕಾರಣ ಶುಕ್ರವಾರ ನಡೆಯುವ ಸಾಹಿತ್ಯ ಸಮ್ಮೇಳನ ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದು ಎನ್ನುವುದು ಸಾಹಿತ್ಯಾಸಕ್ತರ ಚಿಂತನೆಯಾಗಿದೆ.