ಭಾಲ್ಕಿ: ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಮುದ್ರಣ ಮಾಧ್ಯಮ ನೈಜ ವರದಿಯನ್ನು ಜನರಿಗೆ ತಲುಪಿಸುತ್ತದೆ ಎಂದು ಅನುದಾನ ರಹಿತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸದಸ್ಯ ಸುಭಾಷ ದಾಡಗೆ ಹೇಳಿದರು.
ಪಟ್ಟಣದ ಶ್ರೀ ಸಾಯಿ ಇಂಟರ್‌ನ್ಯಾಶನಲ್ ಹೊಟೆಲ್ ಸಭಾಭವನದಲ್ಲಿ ಶನಿವಾರ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಜನರ ದಾರಿ ತಪ್ಪಿಸುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಪತ್ರಿಕೆಗಳು ಸಮಾಜದ ಪ್ರಮುಖ ಭಾಗವಾಗಿದ್ದು, ಸಮಾಜದ ಓರೆ ಕೋರೆಗಳನ್ನು ತಿದ್ದುವ ಕಾರ್ಯ ಮಾಡುತ್ತವೆ ಎಂದು ಹೇಳಿದರು.
ಸದ್ಗುರು ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಮುದ್ದಾ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಅತಿ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಅವರು ಸದಾ ಮೊನಚಾದ ಆಯುಧದ ಕೆಳಗೆ ಕುಳಿತಿರುತ್ತಾರೆ. ಆ ಆಯುಧ ಯಾವಾಗ ಇವರ ತಲೆಯ ಮೇಲೆ ಬೀಳುತ್ತದೆ ಗೊತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಯಲ್ಲೂ ಸಮಾಜಕ್ಕೆ ನೈಜ ಸುದ್ಧಿ ನೀಡಿ, ಸಮಾಜದ ಋಣ ತೀರಿಸುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಿರುತ್ತಾರೆ. ಹೀಗಾಗಿ ಪತ್ರಕರ್ತರನ್ನು ಎಲ್ಲರೂ ಗೌರವಿಸುತ್ತಾರೆ ಎಂದು ವಿಶ್ಲೇಷಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ರಾಜೋಳೆ, ಭಾರತ ಪಬ್ಲಿಕ್ ಶಾಲೆಯ ಅಧ್ಯಕ್ಷ ಪ್ರವೀಣ ಹಣಮಶೆಟ್ಟಿ ಮಾತನಾಡಿದರು. ಎಂ.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನೋದ ಜಗತಾಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಯೋನಿಯರ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಸ್.ಜ್ಯಾಂತೆ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಸತ್ಯಸಾಯಿ ಪಬ್ಲಿಕ್ ಶಾಲೆಯ ಚಂದ್ರಶೇಖರ ಎಮ್ಮೆ, ಗುಣವಾನ ವೈರಾಗೆ, ದೇವಿದಾಸ ರೇಷ್ಮೆ, ವಿಜಯಕುಮಾರ ಪರ್ಮಾ ಉಪಸ್ಥಿತರಿದ್ದರು. ಸೂರ್ಯೋದಯ ಪಬ್ಲಿಕ್ ಶಾಲೆಯ ಅಧ್ಯಕ್ಷ ಸಂತೋಷ ಖಂಡ್ರೆ ಸ್ವಾಗತಿಸಿದರು. ವಿದ್ಯಾಚೇತನ ಪಬ್ಲಿಕ್ ಶಾಲೆಯ ಅಧ್ಯಕ್ಷ ಸುಭಾಷ ಹುಲಸೂರೆ ನಿರೂಪಿಸಿದರು. ಶಾರದಾ ಪಬ್ಲಿಕ್ ಶಾಲೆಯ ಅಧ್ಯಕ್ಷ ವಸಂತ ಪಾಟೀಲ ವಂದಿಸಿದರು.