ಭಾಲ್ಕಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಗಣನೇ ಶುರವಾಗಿದ್ದು, ವಿದ್ಯಾರ್ಥಿಗಳು ಭಯ, ಒತ್ತಡ ಹಾಗೂ ಆತಂಕಕ್ಕೆ ಒಳಗಾಗದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕ ಪಡೆದು ಜಿಲ್ಲೆಗೆ ಕೀರ್ತಿ ತರಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರೀಕ್ಷಾ ಪೂರ್ವ ಮಾರ್ಗದರ್ಶನ ಶಿಬಿರ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಫಲಿತಾಂಶ ಸುಧಾರಣೆ ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಅಧಿಕಾರಿಗಳ ಸಭೆ ನಡೆಸಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷೆ ಭಯ ಹೊಗಲಾಡಿಸುವ ಹಾಗೂ ಮಾರ್ಗದರ್ಶನ ಮಾಡುವ ಬಗ್ಗೆ ಚರ್ಚೆ ನಡೆಸಿದೆ. ಆದರೆ, ಅದು ಅಷ್ಟೊಂದು ಪ್ರಯೋಜನವಾಗಲಿಲ್ಲ. ಹಾಗಾಗಿ ವಿಭಿನ್ನವಾಗಿ ಯೋಚಿಸಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ನೆರವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರೆ ಒಳಿತು ಎಂದು ಭಾವಿಸಿ ಆಯಾ ತಾಲೂಕು ಮಟ್ಟದಲ್ಲಿ ಸಂವಾದ ನಡೆಸಿ, ವಿದ್ಯಾರ್ಥಿಗಳಲ್ಲಿರುವ ಪರೀಕ್ಷೆ ಭಯ ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಪಠ್ಯಕ್ರಮದಲ್ಲಿ ಇರುವ ವಿಷಯಗಳಿಗೆ ಮಾತ್ರ ಪರೀಕ್ಷೆಯಲ್ಲಿ ಉತ್ತರಿಸಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯಪಡಬೇಕಿಲ್ಲ ಎಂದರು. ಪರೀಕ್ಷೆ ಸಮೀಪಿಸುತ್ತಿದ್ದು, ಪಠ್ಯ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ಕಠಿಣ ವಿಷಯಗಳನ್ನು ಪುನಾರವರ್ತನೆ ಮಾಡಿಕೊಳ್ಳಬೇಕು. ಊಟ, ನಿದ್ದೆ ನಿಲ್ಲಿಸಿ ಓದುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಉತ್ತಮ ದಿನಚರಿ ಜತೆಗೆ ಸಮತೋಲನ ಆಹಾರ ಸೇವನೆ, ಬೆಳಗಿನ ಅವ ಧಿಯಲ್ಲಿ ಅಧ್ಯಯನ ಮಾಡುವುದು, ಆಯಾ ವಿಷಯಗಳ ಮೇಲೆ ಆಸಕ್ತಿ ರೂಢಿಸಿಕೊಳ್ಳುವುದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆ ಅಡಗಿದೆ. ಸಾಧನೆಗೆ ಯಾವುದೂ ಅಸಾಧ್ಯವಲ್ಲ. ಜೀವನದಲ್ಲಿ ಗುರಿ, ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಹೆಚ್ಚಿನ ಅಂಕ ಗಳಿಸಿ ತಾಲೂಕು, ಜಿಲ್ಲೆಗೆ ಕೀರ್ತಿ ತಂದುಕೊಡಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಡಾ| ರಾಮಕೃಷ್ಣ ಆಚಾರ್ಯ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸು ಕುರಿತು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ್ ಬಸವ ಗುರುವಿನ ಪೂಜೆ ನೆರವೇರಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ ಅಧ್ಯಕ್ಷತೆ ವಹಿಸಿದ್ದರು. ಮನೋಹರ ಹೋಳ್ಕರ್, ನಾಗಭೂಷಣ ಮಾಮಡಿ, ಬಾಲಾಜಿ ರಾಜೂರೆ,
ಜಯರಾಮ ಬಿರಾದಾರ್ ಇದ್ದರು.