Advertisement

ಭಾಲ್ಕಿ ಗ್ರಂಥಾಲಯಕ್ಕೆ ಸಿದ್ಧವಾಗಿದೆ ನೂತನ ಕಟ್ಟಡ

04:01 PM Oct 30, 2019 | Team Udayavani |

ಭಾಲ್ಕಿ: ಕೆಲವು ವರ್ಷಗಳ ಹಿಂದೆ ಪಟ್ಟಣದಲ್ಲಿ ಹಳೆಯದಾದ ಚಿಕ್ಕ ಕೋಣೆಯಲ್ಲಿ ಗ್ರಂಥಾಲಯ ಇತ್ತು. ಇದರಿಂದ ಪಟ್ಟಣದ ಸಾಹಿತ್ಯಾಸಕ್ತರು ಮತ್ತು ಓದುಗರು ಗ್ರಂಥಾಲಯಕ್ಕೆ ಬಂದು ಪುಸ್ತಕ ಓದಲು ಪೂರಕ ವಾತಾವರಣವೇ ಇರಲಿಲ್ಲ. ಆದರೆ ಕಳೆದ ಸಾಲಿನಲ್ಲಿ ಕ್ಷೇತ್ರದ ಶಾಸಕರ ಮುತುವರ್ಜಿಯಿಂದ ಹಳೆ ಕಟ್ಟಡವನ್ನು ನೆಲಸಮಮಾಡಿ, 1.15 ಕೋಟಿ ರೂ. ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ.

Advertisement

ಕಟ್ಟಡ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಹಳೆ ಕಟ್ಟಡ ನೆಲಸಮಮಾಡಿ, ಕಾಮಗಾರಿಯ ವೇಗ ಹೆಚ್ಚಿಸಿದ ಕ್ಷೇತ್ರದ ಶಾಸಕರು, ಹೊಸ ಕಟ್ಟಡವನ್ನು ಉದ್ಘಾಟನೆಯ ಹಂತಕ್ಕೆ ತಂದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಆದರೆ ಸಾಹಿತ್ಯಾಸಕ್ತರಿಗೆ ಓದಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸುವುದು ಬಹುಮುಖ್ಯವಾದ ಕಾರ್ಯವಾಗಿದೆ.

ಹಳೆ ಕಟ್ಟಡ ನೆಲಸಮ ಮಾಡಿದ ನಂತರ ಒಂದು ವರ್ಷದಿಂದ ಹಳೆ ಕಟ್ಟದಲ್ಲಿರುವ ಕೆಲವೇ ಕೆಲವು ಪುಸ್ತಕಗಳನ್ನು ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸಂಗ್ರಹಿಸಿ, ಓದುಗರಿಗೆ ಅನುವು ಮಾಡಿಕೊಡಲಾಗಿದೆ. ಆದರೆ ಹೆಚ್ಚು ಜನರಿಗೆ ಈ ಸ್ಥಳದಲ್ಲಿ ತಾತ್ಕಾಲಿಕ ಗ್ರಂಥಾಲಯವಿದೆ ಎನ್ನುವ ವಿಷಯವೇ ತಿಳಿದಿಲ್ಲ. ಹೀಗಾಗಿ ಓದುಗರು ಈ ಕಡೆ ಮುಖ ಮಾಡುತ್ತಿಲ್ಲ.

ಈ ಹಿಂದೆ ಕೆಲವು ಸಾಹಿತಿಗಳು ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿ, ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ ಕಟ್ಟಡವಿರಬೇಕು. ಅಲ್ಲದೇ ಈ ಕಟ್ಟದ ವಿಶಾಲವಾದ ಪ್ರಾಂಗಣದಲ್ಲಿ ಕುಡಿಯುವ ನೀರು, ಶೌಚಾಲಯ, ಮುಂತಾದ ಮೂಲಭೂತ ಸೌಕರ್ಯಗಳಿರಬೇಕು. ಸಾವಿರಾರು ಪುಸ್ತಕಗಳನ್ನು ಅಂದವಾಗಿ ಜೋಡಿಸಿಡುವ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರು.

ಇದನ್ನು ಪರಿಗಣಿಸಿದ ಶಾಸಕರು ಜಿಲ್ಲೆಯಲ್ಲಿಯೇ ಉತ್ತಮ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ. ಆದರೆ ಈ ಗ್ರಂಥಾಲಯದಲ್ಲಿ ಓದುಗರಿಗೆ ಬೇಕಾಗುವಷ್ಟು ಗ್ರಂಥಗಳನ್ನು ಸಂಗ್ರಹಿಸುವುದೇ ಮುಖ್ಯ ಕೆಲಸವಾಗಿದೆ ಎನ್ನುವುದು ಸಾಹಿತ್ಯಾಸಕ್ತರ ಅಭಿಮತ.

Advertisement

ಪಟ್ಟಣಕ್ಕೆ ತನ್ನದೇ ಆದ ಐತಿಹಾಸಿಕ ಧಾರ್ಮಿಕ, ಶೈಕ್ಷಣಿಕ ಇತಿಹಾಸವಿದೆ. ನೂರಾರು ಹೆಸರಾಂತ ಲೇಖಕರು, ಸಂಶೋಧಕರು, ಕವಿಗಳು ಇಲ್ಲಿದ್ದಾರೆ. ಹೀಗಾಗಿ ಅವರೆಲ್ಲರಿಗೂ ಒಂದೇ ಕಡೆ ಕುಳಿತು ಓದುವಂಥ ವಾತಾವರಣ ನಿರ್ಮಿಸಿಕೊಡುವ ಗ್ರಂಥಾಲಯ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯ. ಆದರೆ ಈ ಗ್ರಂಥಾಲಯದಲ್ಲಿ ಬೇಡಿಕೆಗೆ ಮತ್ತು ಸ್ಥಳಾವಕಾಶಕ್ಕೆ ತಕ್ಕಂತೆ ಎಲ್ಲಾ ತರಹದ ಪುಸ್ತಕಗಳನ್ನು ಒಟ್ಟುಗೂಡಿಸುವುದೇ ಒಂದು ದೊಡ್ಡ ಕೆಲಸವಾಗಿದೆ ಎನ್ನುತ್ತಾರೆ ಹಿರಿಯ ಸಾಹಿತಿ ವೀರಣ್ಣಾ ಕುಂಬಾರ.

Advertisement

Udayavani is now on Telegram. Click here to join our channel and stay updated with the latest news.

Next