ಭಾಲ್ಕಿ: ಮಾತೃಭಾಷೆ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕ್ಷೇತ್ರದ ಶಾಸಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಶುಕ್ರವಾರ ನಡೆದ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯ ಮನುಷ್ಯರಲ್ಲಿಯ ಕ್ರೌರ್ಯ ಅಳಿಸಿ ಅವರಲ್ಲಿ ಪ್ರೀತಿ ವಿಸ್ವಾಸ ಬೆಳೆಸುವ ಕಾರ್ಯ ಮಾಡುತ್ತದೆ. ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಮತ್ತು ಹದಿನಾರನೇ ಶತಮಾನದ ದಾಸ ಸಾಹಿತ್ಯ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟಿರುವ ಸಾಹಿತ್ಯಗಳಾಗಿವೆ. ಇವು ಕನ್ನಡ ಸಾಹಿತ್ಯವನ್ನು ಉನ್ನತೀಕರಿಸಿವೆ. ನಮ್ಮ ಗಡಿ ಭಾಗದಲ್ಲಿ ಸಾಹಿತಿಗಳ ಕೊರತೆಇಲ್ಲ, ಆದರೆ ನಮ್ಮ ಸಾಹಿತಿಗಳಿಗೆ ಪ್ರೊತ್ಸಾಹದ ಅಗತ್ಯವಿದೆ. ಸಾಹಿತಿಗಳಿಗೆ ಸ್ಫೂರ್ತಿ ಕೊಡುವ ಕಾರ್ಯವನ್ನು ಸಮಾಜ ಮಾಡಬೇಕಿದೆ. ನಮ್ಮ ರಾಜ್ಯದ ನದಿ ನೀರಿನ ಹಂಚಿಕೆ, ಗಡಿ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಗಡಿ ಭಾಗದ ಎಲ್ಲಾ ಭಾಷಿಕರು ಅಭಿವೃದ್ಧಿ ಹೊಂದಬೇಕು. ಆಗ ಮಾತ್ರ ಅವರು ಕನ್ನಡ ಕಲಿಯಲು ಸಾಧ್ಯ ಎಂದರು.
ಭಾಲ್ಕಿ ತಾಲೂಕನ್ನು ಮಾದರಿ ತಾಲೂಕು ಮಾಡುವಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಪಟ್ಟಣದ ಕೆರೆ ತುಂಬುವ ಯೋಜನೆ ತಯಾರಿಯಲ್ಲಿದೆ. ಬರುವ ವರ್ಷದಲ್ಲಿ ಕಾರಂಜಾ ಡ್ಯಾಂ ಮೂಲಕ ಕೆರೆ ತುಂಬುವ ಕೆಲಸ ಮಾಡಲಾಗುವುದು. ಇದರಿಂದ ಅಂತರ್ಜಲ ಹೆಚ್ಚಾಗಿ ಪಟ್ಟಣದ ಕೊಳವೆ ಬಾವಿಗಳು ಮರುಜೀವ ಪಡೆಯುತ್ತವೆ ಎಂದು ಹೇಳಿದರು.
ಲೇಖಕಿ ಡಾ| ಬಿ.ಟಿ.ಲಲಿತಾ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಇದೇವೇಳೆ ಸಾಹಿತ್ಯ ಪರಿಷತ್‌ನ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ನಿಟಕಪೂರ್ವ ಸಮ್ಮೇಳನಾಧ್ಯಕ್ಷ ಡಾ| ವೈಜಿನಾಥ ಭಂಡೆ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಸೋಮನಾಥ ನುಚ್ಚಾ ಅವರಿಗೆ ನಾಡಧ್ವಜ ಹಸ್ತಾಂತರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿ ನುಡಿದರು. ಡಾ| ಸೋಮನಾಥ ನುಚ್ಚಾ ಅಧ್ಯಕ್ಷೀಯ ನುಡಿ ನುಡಿದರು.
ತಾಪಂ ಅಧ್ಯಕ್ಷೆ ರೇಖಾ ವಿಲಾಸಪಾಟೀಲ, ಜಿಪಂ ಸದಸ್ಯೆ ಶೀತಲ ಚವ್ಹಾಣ, ಅಂಬಾದಾಸ ಕೋರೆ, ರವೀಂದ್ರ ರೆಡ್ಡಿ, ಉಷಾ ನಿಟ್ಟೂರಕರ, ರೇಖಾಬಾಯಿ ನೀಲಕಂಠ, ಬಾಬುರಾವ್ ಪಾಟೀಲ, ಮಡಿವಾಳಪ್ಪ ಮಂಗಲಗಿ, ಮಲ್ಲಿಕಾರ್ಜುನ ಹಲಮಂಡಗೆ, ಪ್ರಭುಲಿಂಗ ತುಗಾಂವೆ ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಶಶಿಧರ ಕೋಸಂಬೆ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ರಮೆಶ ಚಿದ್ರಿ ನಿರೂಪಿಸಿದರು. ರಾಜಕುಮಾರ ಹೊಸದೊಡ್ಡೆ ವಂದಿಸಿದರು.