Advertisement

ಮಹನೀಯರ ಆದರ್ಶ ಅನುಸರಿಸೋಣ: ಖಂಡ್ರೆ

04:30 PM Aug 16, 2019 | Team Udayavani |

ಭಾಲ್ಕಿ: ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆಯಾಗಿ ಸಿಕ್ಕಿಲ್ಲ. ಮಹಾತ್ಮ ಗಾಂಧಿ ಸೇರಿದಂತೆ ಹಲವು ಮಹಾತ್ಮರ ನಿರಂತರ ಹೋರಾಟ, ಪ್ರಾಣ ತ್ಯಾಗ, ಬಲಿದಾನದಿಂದ ಇಂದು ನಾವು ಸ್ವತಂತ್ರವಾಗಿದ್ದೇವೆ. ಅಂತಹ ಮಹಾತ್ಮರ ಆದರ್ಶವನ್ನು ನಾವೆಲ್ಲರೂ ಅನುಸರಿಸಬೇಕಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶ ಅಭಿವೃದ್ಧಿಪತ್ತ ಸಾಗುತ್ತಿದೆ. ಮಾಹಿತಿ ತಂತ್ರಜ್ಞಾನ, ಕೈಗಾರಿಕೆ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಅಭಿವದ್ಧಿ ಆಗುತ್ತಿದೆ. ಆದರೆ, ಇನ್ನೂ ಶೇ.20ರಷ್ಟು ಬಡ ಜನರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅನಕ್ಷರತೆ, ಮೌಡ್ಯ, ಅತ್ಯಾಚಾರ, ಭಯೋತ್ಪಾದನೆ ತಾಂಡವವಾಡುತ್ತಿವೆ. ಇವುಗಳಿಗೆ ಮುಕ್ತಿ ಕಾಣಿಸಿ ಎಲ್ಲರೂ ಶಾಂತಿ, ಸಹೋದರತೆ, ಭಾವೈಕ್ಯತೆಯಿಂದ ಜೀವನ ಸಾಗಿಸುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸರಕಾರದಿಂದ ಮತ್ತಷ್ಟು ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು. ಅಲ್ಲದೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಅಲ್ಲಿಯ ಜನರು ಮನೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಂತಹವರಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾನು ನನ್ನ ಶಾಸಕ ಸಂಬಳದ ಮೂರು ತಿಂಗಳ ಸಂಬಳವನ್ನು ಸಂತ್ರಸ್ತರ ಪರಿಹಾರ ನಿಧಿಗೆ ನೀಡುತ್ತೇನೆ ಎಂದು ಘೋಷಿಸಿದರು. ಉಪನ್ಯಾಸಕ ಜಗನ್ನಾಥ ಹೆಬ್ಟಾಳೆ ಉಪನ್ಯಾಸ ನೀಡಿದರು. ಶ್ರೀ ಬಸವಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷೆ ಮೀರಾಬಾಯಿ ಜನಾರ್ಧನ, ಉಪಾಧ್ಯಕ್ಷ ಮಾರುತಿರಾವ್‌ ಮಗರ, ಎಪಿಎಂಸಿ ಅಧ್ಯಕ್ಷ ಬಾಬುರಾವ ಪಾಟೀಲ, ಡಿವೈಎಸ್ಪಿ ವೆಂಕನಗೌಡ ಪಾಟೀಲ, ಪುರಸಭೆ ಸದಸ್ಯರು ಇದ್ದರು. ತಹಸೀಲ್ದಾರ್‌ ಅಣ್ಣಾರಾವ ಪಾಟೀಲ ಸ್ವಾಗತಿಸಿದರು. ಗಣಪತರಾವ್‌ ಕಲ್ಲೂರೆ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next