ಭಾಲ್ಕಿ: ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ಜು. 6ರಿಂದ ಜು. 23ರ ವರೆಗೆ ಮೂರು ಶಾಲೆಗಳ ಅಡುಗೆ ಕೋಣೆಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಜು. 29ರಂದು ಸಾಯಿಗಾಂವ ಮತ್ತು ಜು. 30ರಂದು ಮೊರಂಬಿ ಸರ್ಕಾರಿ ಶಾಲೆ ಅಡುಗೆ ಕೋಣೆ ಬೀಗ ಮುರಿದು ಬಿಸಿಯೂಟ ಪರಿಕರಗಳನ್ನೇ ದೋಚಿದ್ದಾರೆ.
ತಾಲೂಕಿನ ಆಳವಾಯಿ ಗ್ರಾಮದ ಲೋಕನಾಯಕ ಜಯಪ್ರಕಾಶ ಅನುದಾನಿತ ಪ್ರೌಢಶಾಲೆಯಲ್ಲಿ ಜು. 6ರಂದು, ಡಾವರಗಾಂವ ಅನುದಾನಿತ ವಸಂತ ಪ್ರೌಢಶಾಲೆಯಲ್ಲಿ ಜು. 20ರಂದು ಹಾಗೂ ಕೋನಮೆಳಕುಂದಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜು. 23ರಂದು ಕಳ್ಳತನ ನಡೆದ ಪ್ರಕರಣ ದಾಖಲಾಗಿರುವ ವಿಷಯ ತಾಜಾ ಇರುವಾಗಲೇ ಸಾಯಗಾಂವ ಮತ್ತು ಮೊರಂಬಿ ಸರ್ಕಾರಿ ಶಾಲೆಗಳ ಬಿಸಿಯೂಟ ಕೋಣೆಗಳನ್ನು ಒಡೆದು ಕಳ್ಳತನ ಮಾಡಿರುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ತಲೆ ಬಿಸಿಮಾಡಿದೆ.
ಎಲ್ಲ ಕಳ್ಳತನ ಪ್ರಕರಣ ಗಮನಿಸಿದರೆ ಊರ ಹೊರಗಿನ ರಸ್ತೆಗಳಲ್ಲಿನ ಶಾಲೆಗಳನ್ನೇ ಖದೀಮರು ಟಾರ್ಗೆಟ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಲ್ಲದೇ ಅಡುಗೆ ಪರಿಕರಗಳು ಮತ್ತು ದಾಸ್ತಾನುಗಳನ್ನೇ ಕಳ್ಳತನ ಮಾಡಲು ಖದೀಮರು ಯೋಚಿಸಿದಂತೆ ಕಾಣುತ್ತಿದೆ. ಎಲ್ಲ ಐದು ಶಾಲೆಗಳಲ್ಲಿ ಒಂದೇ ಮಾದರಿಯಲ್ಲಿ ಕಳ್ಳತನ ಆಗಿರುವುದು ನೋಡಿದರೆ ಖದೀಮರ ಒಂದೇ ತಂಡ ಕೃತ್ಯ ಎಸೆಗಿರುವ ಸಾಧ್ಯತೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಡಾವರಗಾಂವ ವಸಂತ ಪ್ರೌಢಶಾಲೆಯಲ್ಲಿ ಅಡುಗೆ ಸಾಮಗ್ರಿಗಳು, ಗ್ಯಾಸ್ ಸಿಲಿಂಡರ್, 126 ಕೆಜಿ ಅಕ್ಕಿ, 50 ಕೆಜಿ ಬೇಳೆ ಕಳ್ಳತನ ಮಾಡಿದ್ದಾರೆ. ಅದರಂತೆ ತಾಲೂಕಿನ ಕೋನ ಮೆಳಕುಂದಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿಯೂ ಬಿಸಿಯೂಟ (ಅಕ್ಷರ ದಾಸೋಹ ಯೋಜನೆ ) ಕೋಣೆ ಬೀಗ ಮುರಿದ ಕಳ್ಳರು 4.89 ಕ್ವಿಂ. ಅಕ್ಕಿ, 1.05 ಕ್ವಿಂ. ಬೇಳೆ, ಗ್ಯಾಸ್ ಸಿಲಿಂಡರ್ ಕಳವು ಮಾಡಿದ್ದಾರೆ. ಹಾಗೆಯೇ ತಾಲೂಕಿನ ಆಳವಾಯಿ ಗ್ರಾಮದ ಜೈಪ್ರಕಾಶ ನಾರಾಯಣ ಪ್ರೌಢಶಾಲೆಯಲ್ಲಿಯೂ ಕಳ್ಳತನವಾಗಿದ್ದು, 3.5 ಕ್ವಿಂ. ಅಕ್ಕಿ, 2.5 ಕ್ವಿಂ. ತೊಗರಿಬೇಳೆ, 60 ಕೆಜಿ ಅಡುಗೆ ಎಣ್ಣೆ, 1 ತುಂಬಿದ ಗ್ಯಾಸ್ ಸಿಲಿಂಡರ್, 5 ಕಂಪ್ಯೂಟರ್ ಬ್ಯಾಟರಿ ಕಳವು ಮಾಡಿದ್ದಾರೆ.
ಅದರಂತೆ ಜು.30ರಂದು ತಾಲೂಕಿನ ಮೋರಂಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೋಣೆ ಬೀಗ ಮುರಿದ ಕಳ್ಳರು 3 ಗ್ಯಾಸ್ ಸಿಲಿಂಡರ್, 5 ಕ್ವಿಂ. ಅಕ್ಕಿ, 72 ಕೆಜಿ ಗೋಧಿ, 64 ಕೆಜಿ ಗೋಧಿ, 15 ಕೆಜಿ ಅಡುಗೆ ಎಣ್ಣೆ, 13 ಕೆಜಿ ಹಾಲಿನ ಪುಡಿ, ಕುಕ್ಕರ್, ಕೊಡ, ತಟ್ಟೆ, ಸೌಟು ಸೇರಿದಂತೆ ಅಡುಗೆ ಮನೆಯಲ್ಲಿದ್ದ ಎಲ್ಲ ಸಾಮಾನುಗಳನ್ನು ದೋಚಿಕೊಂಡು ಹೋಗಿದ್ದಾರೆ.