Advertisement

ವಸತಿ ಯೋಜನೆ: ಕಾಂಗ್ರೆಸ್‌-ಬಿಜೆಪಿ ಯೂ ಟರ್ನ್ ತಿಕ್ಕಾಟ

06:46 PM May 20, 2020 | Naveen |

ಭಾಲ್ಕಿ: ತಾಲೂಕಿನ ವ್ಯಾಪ್ತಿಯ ವಿವಿಧ ವಸತಿ ಯೋಜನೆಯಡಿ ಮಂಜೂರಾದ ಬಡವರ ಮನೆ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಸರಕಾರಕ್ಕೆ ಒತ್ತಾಯಿಸಿರುವ ಸಂಸದ ಭಗವಂತ ಖೂಬಾ ಅವರು ಇದೀಗ ಯೂಟರ್ನ್   ಹೊಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷರಾದ ಅಶೋಕ ಮಡ್ಡೆ, ವಿಶಾಲ ಪುರಿ, ಮಾಣಿಕಪ್ಪ ರೇಷ್ಮೆ ಆರೋಪಿಸಿದ್ದಾರೆ.

Advertisement

ಈ ಕುರಿತು ಜಂಟಿ ನೀಡಿರುವ ಅವರು, ವಸತಿ ಯೋಜನೆಯಡಿ ಅಕ್ರಮ ನಡೆದಿದೆ ಎಂದು ದೂರು ನೀಡಿ ಬಡ ಫಲಾನುಭವಿಗಳ ಖಾತೆಗೆ ಸೇರಬೇಕಾದ ನ್ಯಾಯಯುತ ಹಣ ತಡೆ ಹಿಡಿದು ಇದೀಗ ವಸತಿ ಸಚಿವರಲ್ಲಿ ಹಣ ಬಿಡುಗಡೆಗೆ ಕೋರಿರುವ ಸಂಸದರು ಜನರ ನಗೆಪಾಟಿಲಗೀಡಾಗಿದ್ದಾರೆ. ಸಂಸದರ ರಾಜಕೀಯ ಪ್ರೇರಿತ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಮನೆಗಳ ಹಣ ಬಿಡುಗಡಗೆ ತಡೆಹಿಡಿದಿದೆ. ಇದರಿಂದ ಜಿಲ್ಲೆಯ ವಸತಿ ಫಲಾನುಭವಿಗಳ ಮನೆಗಳು ಅಪೂರ್ಣಗೊಂಡಿರುವ ಪರಿಣಾಮ ಆಶ್ರಯ ಇಲ್ಲದೇ ರಸ್ತೆಗೆ ಬರುವಂತಾಗಿದೆ. ವಸತಿ ಮನೆ ಹಣ ಬಿಡುಗಡೆಗೆ ವಿಳಂಬವಾಗುತ್ತಿರುವುದರಿಂದ ಜಿಲ್ಲೆಯ ಸಾವಿರಾರೂ ವಸತಿ ಫಲಾನುಭಗಳ ಆಕ್ರೋಶ ವ್ಯಕ್ತವಾಗುತ್ತಲೇ ದಿಢೀರ್‌ ಎಚ್ಚೆತ್ತುಕೊಂಡಂತೆ ಕಾಣುತ್ತಿರುವ ಸಂಸದರು ಜನರ ಅನುಕಂಪ ಗಿಟ್ಟಿಸಲು ಬರೀ ತೋರಿಕೆಗಾಗಿ ವಸತಿ ಖಾತೆ ಸಚಿವರನ್ನು ಭೇಟಿ ಮಾಡಿ ಹಣ ಬಿಡುಗಡೆಗೆ ಒತ್ತಾಯಿಸಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿದ್ದಾರೆ.

ಭಾಲ್ಕಿ ಕ್ಷೇತ್ರ ಸಂಪೂರ್ಣ ಗುಡಿಸಲು ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ಶಾಸಕ ಈಶ್ವರ ಖಂಡ್ರೆ ಸರಕಾರದ ಮೇಲೆ ನಿರಂತರ ಒತ್ತಡ ತಂದು ದಾಖಲೆ ರೀತಿಯಲ್ಲಿ ಮನೆ ಮಂಜೂರಾತಿ ಮಾಡಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಸಂಸದರು ಕೋವಿಡ್‌ -19 ಸಂಕಷ್ಟದಂತಹ ಸಮಯದಲ್ಲಿ ಭಾಲ್ಕಿ ಕ್ಷೇತ್ರವನ್ನು ಗುರಿಯಾಸಿಕೊಂಡು ಮನೆ ಅನುಷ್ಠಾನದಲ್ಲಿ ಅಕ್ರಮ ನಡೆದಿದೆ ಎಂದು ತನಿಖೆ ನಡೆಸುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಬಳಿಕ ಫಲಾನುಭವಿಗಳ ಖಾತೆಗೆ ಬರಬೇಕಾದ ಅನುದಾನ ತಡೆ ಹಿಡಿದು ಮತ್ತೊಂದಡೆ ವಸತಿ ಖಾತೆ ಸಚಿವರನ್ನು ಭೇಟಿ ಮಾಡಿ ಹಣ ಬಿಡುಗಡೆಗೆ ಒತ್ತಾಯಿಸಿರುವುದು ಸಂಸದರ ದಿವಾಳಿತನ ತೋರಿಸುತ್ತದೆ. ಅರ್ಹ ವಸತಿ ಫಲಾನುಭವಿಗಳ ಖಾತೆಗೆ ಸರಕಾರ ತಕ್ಷಣ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಭಾಲ್ಕಿ: ಸಂಸದ ಭಗವಂತ ಖೂಬಾ ಯೂಟರ್ನ್ ಹೊಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿಸಲು ಅವರು ವಸತಿ ಖಾತೆ ಸಚಿವರಿಗೆ ಮನವಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಬಿಜೆಪಿ ಮುಖಂಡರಾದ ಪ್ರತಾಪ ಪಾಟೀಲ, ಪ್ರಕಾಶ ಬಿರಾದಾರ ಮತ್ತು ವಿಶ್ವನಾಥ ಮೋರೆ, ಭಾಲ್ಕಿ ತಾಲೂಕಿನಲ್ಲಿ ಅರ್ಹವಾಗಿ ಮನೆ ಕಟ್ಟಿಕೊಂಡಿರುವ ಫಲಾನುಭವಿಗಳ ಹಣ ಬಿಡುಗಡೆಗಾಗಿ ಸಂಸದ ಭಗವಂತ ಖೂಬಾ ವಸತಿ ಖಾತೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ವಿನಃ ಅಕ್ರಮವಾಗಿ ಮನೆಕಟ್ಟಿಕೊಂಡಿರುವವರ ಹಣ ಬಿಡುಗಡೆಗೆ ಅವರೂ ಎಂದೂ ಒತ್ತಾಯಿಸಿಲ್ಲ. ಇದು ಈಶ್ವರ ಖಂಡ್ರೆ ಅವರ ಅನುಯಾಯಿಗಳ ಹಗಲು ಗನಸಾಗಿದೆ. ಸಂಸದರ ಮನವಿಯಂತೆ ಅರ್ಹ ಬಡವರು ಮನೆ ಕಟ್ಟಿಕೊಂಡಿರುವವರಿಗೆ ವಸತಿ ಸಚಿವರು ಒಂದು ವಾರದೊಳಗೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಹಗಣರಕ್ಕೆ ಸಿಲುಕಿದ್ದ ಸುಮಾರು 9710 ಮನೆಗಳ ಬಿಲ್‌ ಪಾವತಿ ನಡೆಯುತ್ತಿದೆ ಎಂದು ಈಶ್ವರ ಖಂಡ್ರೆ ಅನುಯಾಯಿಗಳು ಭಾವಿಸಿದ್ದರೆ ಅದು ಅವರ ಮೂರ್ಖತನವಾಗಿದೆ. ತಾಲೂಕಿನಲ್ಲಿ ನಡೆದಿರುವ 91 ಕೋಟಿ ರೂ. ಅವ್ಯವಹಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಬರುವುದಿಲ್ಲ. ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಗಳು, ಶಾಸಕರು ಮತ್ತು ಶಾಸಕರ ಅನುಯಾಯಿಗಳು ಶಿಕ್ಷೆಗೆ ಗುರಿಯಾಗುವ ದಿನಗಳು ದೂರವಿಲ್ಲ. ಸಂದರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಈಶ್ವರ ಖಂಡ್ರೆ ಅನುಯಾಯಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next